ನವದೆಹಲಿ: ರಾಜೀವ್ ಗಾಂಧಿ ಫೌಂಡೇಶನ್ ಗೆ ಚೀನಾದಿಂದ ಹಣ ಪೂರೈಕೆಯಾಗಿದೆ ಎಂಬ ಬಿಜೆಪಿಯ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಚೀನಾದ ಸಂಸ್ಥೆಗಳು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣವನ್ನು ನೀಡುತ್ತಿವೆ. ಭಾರತ ಮತ್ತು ಚೀನಾದ ಸಂಬಂಧ ಗಡಿಯ ವಿಷಯದಲ್ಲಿ ಹಳಸಿರುವಾಗ ಕೇಂದ್ರ ಸರ್ಕಾರ ಇಂತಹ ಹಣವನ್ನು ಏಕೆ ಚೀನಾದಿಂದ ಪಡೆಯಬೇಕು ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಕಳೆದ 6 ವರ್ಷಗಳಲ್ಲಿ ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆ 18 ಸಭೆಗಳನ್ನು ನಡೆಸಿದ್ದಾರೆ. ಆದರೆ ಇದರಿಂದ ದೇಶಕ್ಕೆ ಏನು ಲಾಭವಾಗಿದೆ, ನಿನ್ನೆ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಏಕೆ ಚೀನಾದ ಹೆಸರು ಹೇಳಿ ಅದನ್ನು ಆಕ್ರಮಣಕಾರಿ ಎಂದು ಪ್ರಸ್ತಾಪಿಸಲಿಲ್ಲ ಎಂದು ಕೇಳಿದ್ದಾರೆ.
ಚೀನಾ ಸರ್ಕಾರವನ್ನು ಆಕ್ರಮಣಕಾರಿ ಎಂದು ಪ್ರಧಾನಿ ಹೇಳಬೇಕು ಎಂದು ನಾನು ಈ ಸಂದರ್ಭದಲ್ಲಿ ಒತ್ತಾಯಿಸುತ್ತೇನೆ. ದೇಶದ ಭದ್ರತೆ ವಿಚಾರದಲ್ಲಿ ಹೆಚ್ಚು ಆತಂಕಪಡುವ ಮತ್ತು ಎಚ್ಚರಿಕೆ ವಿಷಯ ಏನೆಂದರೆ ಚೀನಾದ ಕಂಪೆನಿಗಳಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ಪಡೆಯುತ್ತಿರುವುದು ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರಧಾನ ಮಂತ್ರಿಗಳು ಚೀನಾದ ಕಂಪೆನಿಗಳಿಂದ ಪರಿಹಾರ ನಿಧಿಗೆ ಲಕ್ಷಾಂತರ, ಕೋಟ್ಯಂತರ ಹಣ ಪಡೆಯುತ್ತಿದ್ದಾರೆ ಎಂದರೆ ಅವರು ಚೀನಾವನ್ನು ಆಕ್ರಮಣಕಾರಿ ಎಂದು ಕರೆದು ತನ್ನ ದೇಶವನ್ನು ರಕ್ಷಿಸಿಕೊಳ್ಳುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಬಗೆಹರಿಸಲು ಕಳೆದ ಮಾರ್ಚ್ ತಿಂಗಳಲ್ಲಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯನ್ನು ಸ್ಥಾಪಿಸಲಾಗಿತ್ತು. ಅದಕ್ಕೆ ಎಲ್ಲಿಂದ ಹಣ ಬರುತ್ತಿದೆ, ಎಷ್ಟು ಬರುತ್ತಿದೆ ಎಂದು ಬಹಿರಂಗಪಡಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಾ ಬಂದಿವೆ.
Follow us on Social media