ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡ ಪ್ರಧಾನ ಮಂತ್ರಿಗಳ ಆಶಯ ಯೋಜನೆಯಾದ ಮುದ್ರಾ ಮತ್ತು ಜನಧನ್ ಯೋಜನೆಯ ವರದಿಯನ್ನು ಸಂಸದ ನಳಿನ್ಕುಮಾರ್ ಕಟೀಲ್ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು.
ಜಿಲ್ಲೆಯಲ್ಲಿ ಸುಮಾರು ೧.೧೨ ಲಕ್ಷ ಜನರಿಗೆ ೧,೬೦೦ ಕೋಟಿ ರೂ. ಸಾಲ ನೀಡಿ ಉದ್ದಿಮೆದಾರರನ್ನಾಗಿ ಪ್ರೋತ್ಸಾಹಿಸಿದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಹಣಕಾಸು ಇಲಾಖೆ ಕಾರ್ಯದರ್ಶಿ ರಾಜೀವ್ ಕೆ.ಆರ್. ಅವರೊಂದಿಗೆ ಸಭೆ ನಡೆಸಿದ ಅವರು, ದ.ಕ ಜಿಲ್ಲೆಯನ್ನು ಮಾದರಿಯಾಗಿಸಿ ಯೋಜನೆಯನ್ನು ಇಡೀ ದೇಶದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಚಿಸಿದರು.
ಬೇಡಿಕೆ ಪಟ್ಟಿ ಸಲ್ಲಿಕೆ: ಜಿಲ್ಲೆಗೆ ಸಂಬಂಧಿಸಿ ಹೊಸ ಮತ್ತು ಬಾಕಿಯಿರುವ ಯೋಜನೆಗಳ ಕುರಿತು ಸಂಸದ ನಳಿನ್ ಮನವಿ ಸಲ್ಲಿಸಿದರು. ಜಿಲ್ಲೆಗೆ ಕೇಂದ್ರೀಯ ವಿಶ್ವವಿದ್ಯಾಲಯ, ಐ.ಟಿ ಪಾರ್ಕ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಥವಾ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಜೂರು ಮಾಡಬೇಕು. ಮಂಗಳೂರಿನ ಮೀನುಗಾರಿಕಾ ಕಾಲೇಜನ್ನು ಮೇಲ್ದರ್ಜೆಗೇರಿಸಬೇಕು. ಮಂಜೂರಾಗಿ ಬಾಕಿ ಉಳಿದಿರುವ ಯೋಜನೆಗಳಿಗೆ ವೇಗ ನೀಡುವಂತೆ ಕೋರಿದರು.
ದ.ಕ ಜಿಲ್ಲೆಯ ಜನತೆಯ ಮೇಲೆ ನನಗೆ ಅತಿಯಾದ ಪ್ರೀತಿಯಿದೆ. ಶೀಘ್ರ ಅಧಿಕಾರಿಗಳ ವಿಶೇಷ ಸಭೆ ಕರೆದು ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸುವುದಾಗಿ ಪ್ರಧಾನಿ ಭರವಸೆ ನೀಡಿದರು.