ರಾಮನಗರ : ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ತಮ್ಮ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಕಾಲಿಗೆ ಚಕ್ರಕಟ್ಟಿಕೊಂಡು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
ಹೈಕಮಾಂಡ್ ಸೂಚನೆಯ ಮೇರೆಗೆ ಒಂದೆಡೆ ಪಕ್ಷದ ಹಿರಿಯ ನಾಯಕರು, ಪಕ್ಷ ಬಿಟ್ಟು ಹೋದವರನ್ನೆಲ್ಲಾ ಭೇಟಿಯಾಗುತ್ತಿದ್ದರೆ ಮತ್ತೊಂದೆಡೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಪ್ರವಾಸದ ರೂಪುರೇಷೆ ಸಿದ್ಧಗೊಂಡಿದ್ದು ಮತಕ್ಷೇತ್ರ ಕನಕಪುರದಿಂದಲೇ ಸಂಘಟನೆಗೆ ಚಾಲನೆ ನೀಡಿದ್ದಾರೆ.
ಮನೆದೇವರ ದರ್ಶನದಿಂದ ಸಂಘಟನೆಗೆ ಚಾಲನೆ ನೀಡಿದ ಶಿವಕುಮಾರ್, ನಾನು ಕನಕಪುರಕ್ಕೆ, ರಾಮನಗರ ಜಿಲ್ಲೆಗೆ ಮೊದಲ ಸೇವಕ. ಪಕ್ಷದ ಕಾರ್ಯಕರ್ತರಿಗೆ ಮೊದಲ ಆದ್ಯತೆ ಎಂದರು.
ಮುಂದೆ 28 ಬ್ಲಾಕ್ ಕಾಂಗ್ರೆಸ್ ಘಟಕಗಳಿಗೆ ಭೇಟಿ ಕೊಡುವುದೂ ಸೇರಿದಂತೆ ಪ್ರತಿಯೊಬ್ಬ ಕಾರ್ಯಕರ್ತರ ಭೇಟಿ ಹಾಗೂ ರಾಜ್ಯದ ಪ್ರತಿ ಜಿಲ್ಲೆಗೂ ಪ್ರವಾಸ ಮಾಡುವುದಾಗಿ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪ್ರವಾಸದ ಕಾರ್ಯಕ್ರಮಗಳು ಸಿದ್ಧಗೊಳ್ಳುತ್ತಿದ್ದು, ದಿನಕ್ಕೆ 7 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ. ಇಂದಿನಿಂದಲೇ ಅದು ಕನಕಪುರದಿಂದ ಪ್ರಾರಂಭವಾಗಿದೆ. ಮನೆದೇವರ ಮೂಲಕ ಪ್ರವಾಸ ಪ್ರಾರಂಭ ಮಾಡಿದ್ದೇನೆ ಎಂದರು.
ಬೆಂಗಳೂರು ನಗರದಲ್ಲಿರುವ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದೇನೆ.ನಾನೊಬ್ಬ ಶಕ್ತಿಯುತವಾಗಿದ್ದರೆ ಸಾಲದು.ಅದರೊಂದಿಗೆ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು.ಅಂತೆಯೇ ಪರಾಜಿತ ಅಭ್ಯರ್ಥಿಗಳಿಗೂ ಶಕ್ತಿ ಕೊಡಬೇಕಿದೆ ಎಂದು ಒತ್ತಿಹೇಳಿದರು.
ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗಿನ ಸ್ನೇಹದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನ ಉಳಿಸಬೇಕಿದೆ. ನಮ್ಮ ಪಕ್ಷದ ಸಿದ್ಧಾಂತವೇ ಬೇರೆ, ಅವರ ಪಕ್ಷದ ಸಿದ್ಧಾಂತವೇ ಬೇರೆ ಎಂದರು.
ಸರ್ಕಾರ ಕೊರೋನಾಗಾಗಿ ವಿಶೇಷ ಬಜೆಟ್ ಮಾಡಬೇಕು.ಕೋಳಿ 20 ರೂಪಾಯಿಗೂ ಮಾರಾಟವಾಗುತ್ತಿಲ್ಲ.10 ರೂಪಾಯಿಗೂ ತರಕಾರಿ ಖರೀದಿಸುವವರಿಲ್ಲ. ವೈದ್ಯಕೀಯ ಕಾಲೇಜು ಮುಖ್ಯಸ್ಥರ ಸಭೆಗಳನ್ನು ಕರೆದು ಎಲ್ಲಿಂದ ಯಾರಿಗೆ ವೈರಸ್ ಬರುತ್ತಿದೆ ಎಂಬುದರ ಬಗ್ಗೆ ಚರ್ಚಿಸಬೇಕು.
ಹಳ್ಳಿಯಲ್ಲಿ ಕೆಮ್ಮಿದವರನ್ನೆಲ್ಲಾ ಪರೀಕ್ಷಿಸಿ ಸುಖಾಸುಮ್ಮನೆ ಆತಂಕ ಸೃಷ್ಟಿಸಲಾಗುತ್ತಿದೆ. ಸಾಮಾನ್ಯ ಜ್ಞಾನ ಇಲ್ಲದ ರಾಜ್ಯ ಬಿಜೆಪಿ ಸರ್ಕಾರ ಎಡವಿದೆ ಎಂದು ಸರ್ಕಾರವನ್ನು ಟೀಕಿಸಿದರು.