ಪುತ್ತೂರು: ಬೈಕ್ ಮತ್ತು ಮಾರುತಿ ಕಾರು ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹೊರ ವಲಯದ ಕುಂಬ್ರದಲ್ಲಿ ನಡೆದಿದೆ.ಕು೦ಬ್ರ ಪಂಜಿಗುಡ್ಡೆ ನಿವಾಸಿ ರಘುನಾಥ ಶೆಟ್ಟಿ ಮೃತ ದುರ್ದೈವಿಯಾಗಿದ್ದು, ಅವರ ಮಗ ಅನುಷ್ ಶೆಟ್ಟಿ ಗಂಭೀರವಾಗಿ ಗಾಯಗೊಂಡವರು.
ವೃತ್ತಿಯಲ್ಲಿ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಅನುಷ್ ತನ್ನ ಕುಂಬ್ರದ ಮನೆಗೆ ಬಂದಿದ್ದು ಜೂ 3 ರಾತ್ರಿ ಬೆಂಗಳೂರಿಗೆ ಬಸ್ಸು ಮೂಲಕ ವಾಪಸ್ಸಾಗುವವರಿದ್ದರು. ಈ ಹಿನ್ನಲೆ ಅವರ ತಂದೆ ರಘುನಾಥ ಶೆಟ್ಟಿಯವರು ಮಗನನ್ನು ಬೈಕ್ ನಲ್ಲಿ ಕೂರಿಸಿಕೊಂಡು ಪುತ್ತೂರಿಗೆ ಕರೆದುಕೊಂಡು ಹೋಗುತ್ತಿದ್ದರು.
ರಾತ್ರಿ 10 ಗಂಟೆ ಸುಮಾರಿಗೆ ಬೈಕ್ ಕುಂಬ್ರ ಬೆಳ್ಳಾರೆ ರಸ್ತೆಯ ಕುಂಬ್ರದಲ್ಲಿರುವ ಮಂದಾರ ಕಾಂಪ್ಲೆಕ್ಸ್ ತಲುಪಿದಾಗ ಎದುರಿನಿಂದ ಬಂದ ಮಾರುತಿ ಓಮ್ಮಿ ನಡುವೆ ಢಿಕ್ಕಿ ಸಂಭವಿಸಿದೆ.
ಅನುಷ್ ಶೆಟ್ಟಿಯವರ ಕಾಲು ಮುರಿತಕ್ಕೊಳಗಾಗಿದ್ದು ಅವರನ್ನು ಮಂಗಳೂರು ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತಕ್ಕೆ ಕಾರಣವಾದ ಮಾರುತಿ ಒಮ್ನಿಯನ್ನು ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಶೀನಪ್ಪ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media