ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 1,350 ಕೋಟಿ ಮೌಲ್ಯದ ಮುತ್ತು ಮತ್ತು ವಜ್ರಗಳನ್ನು ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾರತಕ್ಕೆ ತಂದಿದ್ದಾರೆ.
ಹಣ ಅಕ್ರಮ ವರ್ಗಾವಣೆ, ಬ್ಯಾಂಕುಗಳಿಗೆ ವಂಚಿಸಿದ ಆರೋಪ ಹೊತ್ತು, ದೇಶಭ್ರಷ್ಟರಾಗಿರುವ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರ ಒಡೆತನ ಸಂಸ್ಥೆಗಳಿಗೆ ಸೇರಿದ ವಜ್ರ ಹಾಗೂ ಮುತ್ತುಗಳನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಹಾಂಗ್‌ಕಾಂಗ್‌ನಿಂದ ಭಾರತಕ್ಕೆ ಬುಧವಾರ ತಂದಿದ್ದಾರೆ. ಮೂಲಗಳ ಪ್ರಕಾರ ವಜ್ರ, ಮುತ್ತುಗಳು ಹಾಗೂ ಬೆಳ್ಳಿಯ ಆಭರಣಗಳ ಒಟ್ಟು ತೂಕ 2,300 ಕೆ.ಜಿ ಇದ್ದು, ಇವುಗಳ ಮೌಲ್ಯ ಸುಮಾರು 1,350 ಕೋಟಿ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವಜ್ರಾಭರಣಗಳಿರುವ ಒಟ್ಟು 108 ಸರಕುಗಳನ್ನು ಮುಂಬೈನ ಬಂದರಿನಲ್ಲಿ ತಂದಿಳಿಸಲಾಯಿತು. ಈ ಪೈಕಿ 32 ವಸ್ತುಗಳು ನೀರವ್ ಮೋದಿ ಸ್ವಾಮ್ಯದ ಕಂಪನಿಗಳಿಗೆ ಸೇರಿದ್ದರೆ, ಉಳಿದವು ಚೋಕ್ಸಿ ಒಡೆತನದ ಸಂಸ್ಥೆಗಳಿಗೆ ಸೇರಿದವು ಎಂದೂ ತಿಳಿಸಿದ್ದಾರೆ.
Follow us on Social media