ಮಂಗಳೂರು/ಚಿಕ್ಕಮಗಳೂರು/ಮಡಿಕೇರಿ: ಪಶ್ಚಿಮ ಘಟ್ಟ ಮತ್ತು ಮಲೆ ನಾಡಿನ ಹಲವು ತಾಲೂಕುಗಳಲ್ಲಿ ಭಾನುವಾರದಿಂದ ಗುರುವಾರದವರೆಗೂ ಸುರಿದ ಭಾರೀ ಮಳೆಯಿಂದಾಗಿ ಹಲವು ಮನೆಗಳು ,ಸೇತುವೆಗಳು ಹಾನಿಗೊಳಗಾಗಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಬೆಳ್ತಂಗಡಿ ತಾಲೂಕಿನ ಹಲವು ಪ್ರದೇಶಗಳಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು ಚಾರ್ಮಾಡಿ ಘಾಟ್ ನಲ್ಲಿ ಭೂ ಕುಸಿತ ಉಂಟಾಗಿದೆ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಸ್ನಾನಘಟ್ಟ ಕೂಡ ಮುಳುಗಿದ್ದು ಭಕ್ತಾದಿಕಗಳಿಗೆ ಸ್ನಾನಕ್ಕೆ ಅವಕಾಶ ನೀಡುತ್ತಿಲ್ಲ.
ಚಾರ್ಮಾಡಿ ಘಾಟ್ ನ ರಸ್ತೆಗಳ ಮೇಲೆ ಬೃಹತ್ ಬಂಡೆಗಳು ಉರುಳಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಿದ್ದಾಗಿ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಹೇಳಿದ್ದಾರೆ, ತಳಮಟ್ಟದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಭೂಕುಸಿತದ ಎಚ್ಚರಿಕೆ ನೀಡಲಾಗಿದೆ, ಹೀಗಾಗಿ ಮಿತಬಾಗಿಲು ಗ್ರಾಮದ ಸರ್ಕಾರಿ ಶಾಲೆಗೆ ಕೆಲವರನ್ನು ಸ್ಥಳಾಂತರಿಸಲಾಗಿದೆ.
ಚಾರ್ಮಾಡಿ ಘಾಟ್ ನಲ್ಲಿ ಹಲವು ಮರಗಳು ಧರೆಗುರುಳಿವೆ, ಮೃತ್ಯುಂಜಯ ನದಿ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು,ಅಂತರ-ಅರ್ನಾಪಡೆ ರಸ್ತೆ ಮತ್ತು ಸೇತುವೆ ಸಂಪೂಪರ್ಣವಾಗಿ ಮುಳುಗಡೆಯಾಗಿದೆ. ಚಾರ್ಮಾಡಿ ಗ್ರಾಮದಲ್ಲಿ ಅರ್ಥ್ ಮೂವರ್ಸ್ ನಿಂದ ಮರಗಳನ್ನು ತೆರವು ಗೊಳಿಸಲಾಗಿದೆ.
ಚಿಕ್ಕಮಗಳೂರಿನಲ್ಲಿ ಕಸಬಾ ಹೋಬಳಿಲ್ಲಿ 14 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ, ಮುದಿಗೆರೆ ತಾಲೂಕಿನಲ್ಲಿ ಮನೆಯೊಂದು ಸಂಪೂರ್ಣವಾಗಿ ನಾಶವಾಗಿದೆ. ಆದರೆ ಯಾವುದೇ ಪ್ರಾಣಾಪಾಯವಾಗಿಲ್ಲ, ಕುದುರೆಮುಖ ಚನ್ನಹಾಡ್ಲು ಮತ್ತು ಹಿರೆ ಬೈಲ್ ನಲ್ಲಿ ಹೇಮಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ, ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿಯನ್ನು ಅಂದಾಜು ಮಾಡಲು ಸಚಿವ ಸಿ.ಟಿ.ರವಿ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
Follow us on Social media