ಮಂಡ್ಯ: ಪತ್ರಕರ್ತರಿಗೆ ಕೋವಿಡ್-19 ಪರೀಕ್ಷೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿ ದಾಂಧಲೆ ಎಬ್ಬಿಸಿದ ಆರೋಪದ ಮೇಲೆ ಜೆಡಿಎಸ್ ನಾಯಕ ಶ್ರೀಕಂಠೇ ಗೌಡ,ಅವರ ಪುತ್ರ ಮತ್ತು ಇತರ ಮೂವರ ವಿರುದ್ಧ ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇಂದು ಬೆಳಗ್ಗೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಕೊರೋನಾ ವೈರಸ್ ಪತ್ತೆ ಪರೀಕ್ಷೆ ಆಯೋಜಿಸಲಾಗಿತ್ತು. ನಗರ ಮತ್ತು ಮಂಡ್ಯದ ಇತರ ಭಾಗದ ಪತ್ರಕರ್ತರು ಪರೀಕ್ಷೆ ಮಾಡಿಸಿಕೊಳ್ಳಲೆಂದು ಬಂದಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ನ ವಿಧಾನಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ ಮತ್ತು ಅವರ ಬೆಂಬಲಿಗ ಸ್ಥಳೀಯರು ಸ್ಥಳಕ್ಕೆ ಬಂದು ಅಲ್ಲಿ ಶಿಬಿರ ಆಯೋಜಿಸದಂತೆ ಪ್ರತಿಭಟನೆ ಮಾಡಿದರು.
ನಿನ್ನೆ 15 ಪತ್ರಕರ್ತರ ಮತ್ತು ಇಂದು 27ಪತ್ರಕರ್ತರ ಕೊರೋನಾ ಪರೀಕ್ಷೆ ನಡೆಯುತ್ತಿತ್ತು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ ಎಂ ವಿ ವೆಂಕಟೇಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜಕೀಯ ನಾಯಕರು ಮತ್ತು ಅವರ ಬೆಂಬಲಿಗರು ಬಂದು ದಾಂಧಲೆ ನಡೆಸಿದ್ದರಿಂದ ಶಿಬಿರ ಮುಂದುವರಿಸಲಾಗಲಿಲ್ಲ. ಈ ಬಗ್ಗೆ ಪತ್ರಕರ್ತರು ಲಿಖಿತ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಮಂಡ್ಯ ಪೊಲೀಸ್ ಸೂಪರಿಂಟೆಂಡೆಂಟ್ ಕೆ ಪರಶುರಾಮ ತಿಳಿಸಿದ್ದಾರೆ.
Follow us on Social media