ಬೆಂಗಳೂರು: ಚಿತ್ರರಂಗ ಹಾಗೂ ರಾಜಕೀಯ ರಂಗ ಒಂದು ರೀತಿಯ ಅವಿನಾಭಾವಯ ನಂಟನ್ನು ಹೊಂದಿದೆ. ಸಿನಿಮಾ ನಟರು ರಾಜಕೀಯಕ್ಕೆ ಬರುವುದು ಸಾಮಾನ್ಯ. ಆದರೆ, ರಾಜಕೀಯಕ್ಕೆ ಬಂದವರು ಸಿನಿಮಾದಲ್ಲಿ ನಟಿಸುವುದು ಅತ್ಯಂತ ವಿರಳ. ನೈಜ ಘಟನೆ ಆಧಾರಿತ ಚಿತ್ರವೊಂದರಲ್ಲಿ ಸಚಿವ ಸುಧಾಕರ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕಾಣಿಸಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ನೀಟ್ ಪರೀಕ್ಷೆ ಆಕಾಂಕ್ಷಿ ತನುಜಾ ಅವರ ಕಥೆಯಾಧರಿಸಿ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ತಯಾರಾಗುತ್ತಿದ್ದು, ಚಿತ್ರದಲ್ಲಿ ಸುಧಾಕರ್ ಹಾಗೂ ಸಿಎಂ ಯಡಿಯೂರಪ್ಪ ಇಬ್ಬರು ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಕೊರೋನಾ ಕಾರಣದಿಂದ ನೀಟ್ ಪರೀಕ್ಷೆಗೆ ತನುಜಾ ಅವರು ಹಾಜರಾಗಲು ಸಾಧ್ಯವಾಗಿರಲಿಲ್ಲ. 2020ರ ಸೆಪ್ಟೆಂಬರ್ 13ರಂದು ನೀಟ್ ಪರೀಕ್ಷೆ ನಡೆದಿತ್ತಾದರೂ ಅದಾಗಲೇ ತನುಜಾ ಅವರ ಮನೆ ಇರುವ ಪ್ರದೇಶವನ್ನು ಕಂಟೈನ್ ಮೆಂಟ್ ಝೋನ್ ಎಂದು ಗುರುತಿಸಲಾಗಿತ್ತು. ಇದಷ್ಟೇ ಅಲ್ಲದೆ ತನುಜಾ ಅವರಲ್ಲೂ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಮೊದಲ ಬಾರಿ ಪರೀಕ್ಷೆ ಕೈ ತಪ್ಪಿದ್ದಕ್ಕೆ ಬೇಸರಗೊಂಡಿದ್ದ ತನುಜಾ ಅವರು, ಎನ್’ಟಿಎ ಎರಡನೇ ಬಾರಿಗೆ ನೀಟ್ ಪರೀಕ್ಷೆ ನಡೆಸಲು ಒಪ್ಪಿದಾಗ ಬಹಳ ಖುಷಿಪಟ್ಟಿದ್ದರು. ಆದರೆ, ಹೀಗೆ ಎರಡನೇ ಬಾರಿ ಪರೀಕ್ಷೆ ಬರೆಯಬೇಕು ಎಂದರೆ, ಕೊರೋನಾ ಸಂಬಂಧಿತ ವರದಿ, ದಾಖಲೆಗಳನ್ನು ಸಲ್ಲಿಸಬೇಕಿತ್ತು. ಆದರೆ, ಇಂಟರ್ನೆಟ್ ಸಮಸ್ಯೆಯಿಂದಾಗಿ ದಾಖಲೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ.
ಈ ವಿಚಾರವನ್ನು ತನುಜಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ಅವರ ಗಮನಕ್ಕೂ ಬಂದಿತ್ತು. ಬಳಿಕ ಇಬ್ಬರೂ ನಾಯಕರು ಎನ್’ಟಿಎ ತಾಂತ್ರಿಕ ನಿರ್ದೇಶಕರ ಜೊತೆ ಮಾತುಕತೆ ನಡೆಸಿದ್ದರು. ಈ ಮೂಲಕ ತನುಜಾ ನೀಟ್ ಪರೀಕ್ಷೆ ಬರೆದು ಯಶಸ್ವಿಯಾಗಿ ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದರು.
ಈ ನೈಜ ಘಟನೆಯನ್ನು ಹರೀಶ್ ಎಂ.ಡಿ ಹಳ್ಳಿಯವರು ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ನಟಿಸುವಂತೆ ಸಚಿವ ಸುಧಾಕರ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಮೂರು ದಿನ ಕಾಲಾವಕಾಶ ಕೊಡುವಂತೆ ಕೇಳಿದ್ದೆ. ಬಳಿಕ ಸುಧಾಕರ್ ಅವರು ಭೇಟಿ ಮಾಡಿ ಚರ್ಚೆ ನಡೆಸುವಂತೆ ತಿಳಿಸಿದ್ದರು. ಇದೀಗ ಚಿತ್ರದಲ್ಲಿ ನಟಿಸಲು ಸುಧಾಕರ್ ಅವರು ಒಪ್ಪಿಗೆ ನೀಡಿದ್ದು, ಮಾರ್ಚ್ ತಿಂಗಳಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಆಗಸ್ಟ್ ತಿಂಗಳಿನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹರೀಶ್ ಅವರು ಮಾಹಿತಿ ನೀಡಿದ್ದಾರೆ.
Follow us on Social media