ದೆಹಲಿ: ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿದ್ದಕ್ಕೆ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸುಪ್ರೀಂ ಕೋರ್ಟ್ ನೂಪುರ್ ಶರ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಅವರು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದೆ.
ನೂಪುರ್ ಶರ್ಮ ವಿವಾದಾತ್ಮಕ ಹೇಳಿಕೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಉದಯ್‌ಪುರದಲ್ಲಿ ಟೈಲರ್‌ನ ಹತ್ಯೆಯಾದ ದುರದೃಷ್ಟಕರ ಘಟನೆಗೆ ಆಕೆಯ ಆಕ್ರೋಶವೇ ಕಾರಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನೂಪುರ್ ಶರ್ಮಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸುಪ್ರೀಂ ಕೋರ್ಟ್, ಅಮಾನತುಗೊಂಡಿರುವ ಬಿಜೆಪಿ ವಕ್ತಾರರು ರಾಷ್ಟ್ರದ ಭದ್ರತೆಗೆ ಬೆದರಿಕೆ ಹಾಕಿರುವುದನ್ನು ಗಮನಿಸಿ ಇಡೀ ದೇಶದ ಕ್ಷಮೆಯಾಚಿಸುವಂತೆ ಸೂಚಿಸಿದೆ. ಆಕೆ ವಕೀಲೆ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ತಪರಾಕಿ ಹಾಕಿದೆ.
ಆಕೆಯ ಹೇಳಿಕೆ ಹೇಗೆ ಪ್ರಚೋದನೆ ನೀಡಿತು ಎಂಬುದನ್ನು ನಾವು ನೋಡಿದ್ದೇವೆ, ಉದಯಪುರದಲ್ಲಿ ಟೈಲರ್ ಕೊಲೆಯಾದ ದುರದೃಷ್ಟಕರ ಘಟನೆಗೆ ಆಕೆ ಏಕಾಏಕಿ ಕಾರಣವಾಗಿದ್ದಾರೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.
ಶರ್ಮಾ ಹೇಳಿಕೆಗಳು ಆಕೆಯ ಸೊಕ್ಕು ಮತ್ತು ಹಠಮಾರಿತನವನ್ನು ತೋರಿಸುತ್ತದೆ, ಆಕೆ ಪಕ್ಷದ ವಕ್ತಾರರಾಗಿರಬಹುದು, ಆದರೆ ಈ ನೆಲದ ಕಾನೂನನ್ನು ಗೌರವಿಸದೆ ಯಾವುದೇ ಹೇಳಿಕೆ ನೀಡಬಾರದು ಎಂದು ಸುಪ್ರೀಂಕೋರ್ಟ್ ಕಿಡಿ ಕಾರಿದೆ.
ನೂಪುರ್ ಶರ್ಮಾ ಹೈಕೋರ್ಟ್ಗೆ ಹೋಗಿ ಅರ್ಜಿ ಸಲ್ಲಿಸಲಿ ಎಂದು ನೂಪುರ್ ಶರ್ಮಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನೂಪುರ ಶರ್ಮಾಗೆ ದೆಹಲಿ ಪೊಲೀಸರು ರೆಡ್ ಕಾರ್ಪೆಟ್ ಸ್ವಾಗತ ಕೋರಿರಬೇಕು. ಇಷ್ಟೊಂದು ಎಫ್.ಐ.ಆರ್. ದಾಖಲಾದರೂ ದೆಹಲಿ ಪೊಲೀಸ್ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ತಮ್ಮ ವಿರುದ್ಧದ ಎಲ್ಲ ಕೇಸ್ ಗಳನ್ನು ದೆಹಲಿಗೆ ವರ್ಗಾವಣೆ ಮಾಡಬೇಕೆಂದು ನೂಪುರ್ ಶರ್ಮಾ ಕೋರಿದ್ದರು. ಇದೀಗ ನೂಪುರ್ ಶರ್ಮಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Follow us on Social media