ರಾಮನಗರ: ಕೇಂದ್ರ ಸರಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕವೇ ಮೊತ್ತ ಮೊದಲಿಗೆ ಜಾರಿ ಮಾಡುವ ರಾಜ್ಯವಾಗಲಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರು ಹೇಳಿದ್ದಾರೆ.
74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶನಿವಾರ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೇರಿಸಿ ಭಾಷಣ ಮಾಡಿದ ಅವರು, ಕೇಂದ್ರ ಸರಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕವೇ ಮೊತ್ತ ಮೊದಲಿಗೆ ಜಾರಿ ಮಾಡುವ ರಾಜ್ಯವಾಗಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇಡೀ ದೇಶದ ದಿಕ್ಸೂಚಿಯನ್ನೇ ಬದಲಿಸುವ ಶಕ್ತಿ ಇರುವ ಹಾಗೂ ಶೈಕ್ಷಣಿಕ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಕ್ಕೆ ಹೊಸ ನೀತಿಯೂ ಮತ್ತಷ್ಟು ಬಲ ತುಂಬಲಿದೆ.ಹೀಗಾಗಿ ಈ ನೀತಿಯನ್ನು ಮೊತ್ತ ಮೊದಲು ಅಂಗೀಕರಿಸಿದ ರಾಜ್ಯ ಕರ್ನಾಟಕವೇ ಆಗಿದೆ.ಹೊಸ ನೀತಿಯ ಕರಡು ಪ್ರತಿ ಸಿಕ್ಕಿದ ಕೂಡಲೇ ಸರಕಾರ ಇದಕ್ಕೆ ಸಂಬಂಧಿಸಿ ಕಾರ್ಯಪಡೆಯನ್ನು ರಚನೆ ಮಾಡಿತ್ತು.ಕೇಂದ್ರ ನೀತಿಯನ್ನು ಪ್ರಕಟಿಸಿದ ಮೇಲೆ ಕಾರ್ಯಪಡೆ ಜತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿ ದೆ.ನೀತಿಯ ಜಾರಿಯ ಬಗ್ಗೆ ಆದಷ್ಟು ಬೇಗ ಈ ಕಾರ್ಯಪಡೆ ವರದಿ ನೀಡಲಿದೆ ಎಂದು ಅವರು ಹೇಳಿದರು.
ಎಸ್‌ಡಿಪಿಐ, ಪಿಎಫ್ಐ ಬೆಳೆಯುವುದಕ್ಕೆ ಕಾರಣ ಕಾಂಗ್ರೆಸ್
ರಾಜ್ಯದಲ್ಲಿ ಎಸ್‌ಡಿಪಿಐ, ಪಿಎಫ್ಐ ಬೆಳೆಯುವುದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಹೇಳಿದ ಅವರು, ಕೆಪಿಸಿಸಿ ಅಧ್ಯಕ್ಷರ ಹೇಳುವುದೆಲ್ಲ ಸುಳ್ಳು. ನವೀನ್ ಅವರ ಫೇಸ್ ಬುಕ್ ಪೋಸ್ಟ್ ನೋಡಿದರೆ, ಎಲ್ಲವು ತಿಳಿಯುತ್ತದೆ. ಕಾಂಗ್ರೆಸ್ ಹತಾಶೆಗೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತನೊಬ್ಬ ಫೇಸ್ಬುಕ್‌ನಲ್ಲಿ ಬರೆದು ಅನಾಹುತ ಮಾಡಿಕೊಂಡಿದ್ದಾನೆ. ಹೀಗಾಗಿ ತಪ್ಪು ಮಾಡಿರುವ ಕಾಂಗ್ರೆಸ್ ಎಲ್ಲ ಕಡೆ ಬೊಟ್ಟು ಮಾಡುತ್ತಿದೆ. ಪಿಎಫ್ಐ ವಿರುದ್ದದ 175 ಕ್ಕೂ ಹೆಚ್ಚು ಕೇಸ್ ಗಳನ್ನು ರದ್ದುಗೊಳಿಸಿದ್ದು ಸಿದ್ದರಾಮಯ್ಯ ಅವರ ಸರಕಾರ. ಅವರೇ ಈ ಬಗ್ಗೆ ಹೇಳಬೇಕು ಎಂದು ಕುಟುಕಿದರು. ನಿಜವಾದ ಕೋಮುವಾದಿಗಳು ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್ ಗೆ ಸ್ಪಷ್ಟವಾದ ನಿಲುವು ಇರಬೇಕು. ಇಲ್ಲಿ ಎಲ್ಲವನ್ನು ಬೆರೆಕೆ ಮಾಡಬಾರದು. ಎಸ್ ಡಿಪಿಐ, ಪಿಎಫ್ಐ ಬೆಳೆಯುವುದಕ್ಕೆ ಕಾಂಗ್ರೆಸ್ ಕಾರಣ. ಹೀಗಾಗಿ ಕಾಂಗ್ರೆಸ್ ತನ್ನ ತಪ್ಪನ್ನು ಮೊದಲು ತಿಳಿದುಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಎಸ್ ಡಿಪಿಐ ಹಾಗು ಪಿಎಫ್ ಐ ಸಂಘಟನೆಯನ್ನು ರದ್ದು ಪಡಿಸುವ ಚಿಂತನೆ ನಡೆಯುತ್ತಿದೆ ಎಂದರು.