ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಅಂತರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದ್ದು, ಇದೀಗ ಅದನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಇಂದು ಅಧಿಸೂಚನೆ ಹೊರಡಿಸಿದೆ.
ಮಂಗಳವಾರ ಅನ್‌ಲಾಕ್ 5ರ ಮಾರ್ಗಸೂಚಿಗಳನ್ನೇ ನವೆಂಬರ್ 30ರ ವರೆಗೆ ವಿಸ್ತರಿಸಿ ಗೃಹ ಸಚಿವಾಲಯ ಆದೇಶ ಹೊರಡಿಸಿದ ಬೆನ್ನಲ್ಲೆ ಡಿಜಿಸಿಎ ತನ್ನ ಆದೇಶವನ್ನು ಹೊರಡಿಸಿದೆ. ಇನ್ನು ಪ್ರಯಾಣಿಕರ ವೈಮಾನಿಕ ಪ್ರಯಾಣಕ್ಕೆ ಅನ್‌ಲಾಕ್ ಮಾರ್ಗಸೂಚಿಯಂತೆ ಅನುಮತಿ ಇರುವುದಿಲ್ಲ. ಅದಾಗ್ಯೂ ಗೃಹ ಸಚಿವಾಲಯದಿಂದ ಅನುಮತಿ ಪಡೆದವರು ಮಾತ್ರವೇ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಡಿಜಿಸಿಎ ತಿಳಿಸಿದೆ.
ಈ ನಿರ್ಬಂಧವೂ ಕಾರ್ಗೋ ವಿಮಾನ ಸೇವೆಗೆ ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.
ಮಾರ್ಚ್ 25ರಂದು ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ನಂತರ ಎಲ್ಲಾ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು.
ವಂದೇ ಭಾರತ್ ಮಿಷನ್ ಅಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ. ಈ ವಿಮಾನಗಳ ಹಾರಾಟಕ್ಕೆ ಅನುಮತಿ ಇದೆ. ಅಲ್ಲದೆ ಅನ್‌ಲಾಕ್ ಬಳಿಕ ಕೆಲವು ದೇಶಗಳಿಗೆ ವಿಮಾನ ಸಂಚಾರ ಆರಂಭಿಸಲಾಗಿದೆ.
Follow us on Social media