ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯನ್ನು ಕೇಂದ್ರ ಸರ್ಕಾರ ಘೋಷಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ನಮಗೆ ಯಾವಾಗಲೂ ಜನರು ಮೊದಲು ಎಂದು ಒತ್ತಿ ಹೇಳಿದ್ದಾರೆ.
ನಮಗೆ ಯಾವಾಗಲೂ ಜನರು ಮೊದಲು. ಇಂದಿನ ನಿರ್ಧಾರಗಳು ವಿಶೇಷವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಗಮನಾರ್ಹ ಇಳಿಕೆಗೆ ಸಂಬಂಧಿಸಿದ ನಿರ್ಧಾರಗಳು ವಿವಿಧ ಕ್ಷೇತ್ರಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ. ನಮ್ಮ ನಾಗರಿಕರಿಗೆ ಪರಿಹಾರವನ್ನು ಮತ್ತು ಮತ್ತಷ್ಟು ಜೀವನದ ಸುಲಭತೆಯನ್ನು ಒದಗಿಸುತ್ತವೆ ಎಂದು ಪ್ರಧಾನಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೇಂದ್ರೀಯ ಅಬಕಾರಿ ಸುಂಕ ಕಡಿತದಿಂದ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 9.5 ರೂ ಮತ್ತು ಡೀಸೆಲ್ ಬೆಲೆಯಲ್ಲಿ ರೂ.7 ರಷ್ಟು ಇಳಿಕೆಯಾಗಿದೆ. ದೆಹಲಿಯಲ್ಲಿ ಭಾನುವಾರದಿಂದ 95.91 ರೂ.ದರದಲ್ಲಿ ಪೆಟ್ರೋಲ್ ಸಿಗಲಿದೆ. ಸದ್ಯ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 105.41 ರೂನಷ್ಟಿದೆ. ರೂ. 96.67 ಪೈಸೆಯಿರುವ ಡೀಸೆಲ್ ದರ 89.67 ರೂ.ಆಗಲಿದೆ.
ಅಬಕಾರಿ ಸುಂಕ ಕಡಿತವನ್ನು ಘೋಷಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇದೇ ರೀತಿಯ ಕಡಿತವನ್ನು ಜಾರಿಗೆ ತರಲು ಮತ್ತು ಸಾಮಾನ್ಯ ಜನರಿಗೆ ಪ್ರಯೋಜನ ಮಾಡುವಂತೆ ರಾಜ್ಯಗಳಿಗೆ ಮನವಿ ಮಾಡಿದ್ದಾರೆ.
Follow us on Social media