ಧಾರವಾಡ: ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಶೀತ ಗಾಳಿಯೊಂದಿಗೆ ಎಡೆಬಿಡದೆ ಮಳೆ ಸುರಿಯುತ್ತಿದೆ. ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿನ ಕೆರೆ ತುಂಬಿ ಹರಿದು 3ನೇ ತರಗತಿಯ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ
ಕೋಡಿ ಬಿದ್ದಿದ್ದ ಗಂಜಿಗಟ್ಟಿ ಕೆರೆ ನೀರಿನಲ್ಲಿ ಕೊಚ್ಚಿ ಹೋಗಿರುವ ಬಾಲಕಿಯ ಮೃತದೇಹದ ಪತ್ತೆಗೆ ಎನ್ಡಿಆರ್ಎಫ್ ತಂಡ ತೀವ್ರ ಹುಡುಕಾಟ ನಡೆಸುತ್ತಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿ ನ ಗಂಜಿಗಟ್ಟಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಎಂಟು ವರ್ಷದ ಬಾಲಕಿ ಶ್ರೀದೇವಿ ಗಾಣಿಗೇರ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.
ಧಾರಾಕಾರ ಮಳೆಗೆ ಗಂಜಿಗಟ್ಟಿ ಕೆರೆ ತುಂಬಿ ಕೋಡಿ ಬಿದ್ದಿದೆ. ಬಾಲಕಿ ತನ್ನ ತಾಯಿಯ ಜೊತೆ ಹೊಲಕ್ಕೆ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಊಟದ ಬುತ್ತಿ ಕೊಡಲು ಶ್ರೀದೇವಿ ಮತ್ತವಳ ತಾಯಿ ತೆರಳುತ್ತಿದ್ದರು. ಈ ವೇಳೆ ರಸ್ತೆ ದಾಟುವಾಗ ಕಾಲು ಜಾರಿದೆ. ರಸ್ತೆಯ ಮೇಲೆ ಹರಿಯುತ್ತಿದ್ದ ನೀರಿನ ರಭಸಕ್ಕೆ ಬಾಲಕಿ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ. ಶ್ರೀದೇವಿ ಗಾಣಿಗೇರ್ ಳನ್ನು ಮೇಲೆತ್ತಲು ಸ್ಥಳೀಯ ಯುವಕರು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.
ಕಲಘಟಗಿ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿಯ ಜೊತೆಗೆ ಎನ್ಡಿಆರ್ಎಫ್ ತಂಡ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದೆ. ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತು ತಹಶೀಲ್ದಾರ್ ಅಶೋಕ್ ಶಿಗ್ಗಾವಿ ಅವರು ಬಾಲಕಿ ಶ್ರೀದೇವಿ ಮನೆಗೆ ಭೇಟಿ ನೀಡಿ ತಂದೆ- ತಾಯಿಗೆ ಸಾಂತ್ವನ ಹೇಳಿದ್ದಾರೆ.
Follow us on Social media