ನವದೆಹಲಿ: ಕೊರೊನಾ ವೈರಸ್ ಹಬ್ಬುವ ವಿಷಯದಲ್ಲಿ ಪ್ರಪಂಚದ ಉಳಿದ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಸೋಂಕು ಪ್ರಸರಣ ಪ್ರಮಾಣ ಅತ್ಯಂತ ಕಡಿಮೆಯಿದೆ. ಅಲ್ಲದೆ, ಸೋಂಕಿನಿಂದ ಚೇತರಿಸಿಕೊಳ್ಳುವವರ ಸಂಖ್ಯೆಯೂ ಆಶಾದಾಯಕವಾಗಿದೆ. ಈ ವೈರಸ್‌ಗೆ ಸೂಕ್ತ ಲಸಿಕೆ ಇಲ್ಲದಿದ್ದರೂ, ನಮ್ಮ ವೈದ್ಯರು ಲಭ್ಯವಿರುವ ಔಷಧಿಗಳನ್ನು ಬಳಸಿ ಚಿಕಿತ್ಸೆ ಕಲ್ಪಿಸುತ್ತಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಲಾಕ್ ಡೌನ್ ನಂತಹ ಕಠಿಣ ಕ್ರಮಗಳು ಕೊರೊನಾ ಹರಡುವುದನ್ನು ಬಹುತೇಕ ನಿರ್ಬಂಧಿಸಿವೆ. 130 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ನಿತ್ಯ 400ರಿಂದ 500 ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ದೆಹಲಿಯ ಮರ್ಕಜ್ ಜಮಾತ್ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆ ಪ್ರಕರಣಗಳನ್ನು ಹೊರತುಪಡಿಸಿದರೆ, ಭಾರತ ಅತ್ಯಂತ ಕಡಿಮೆ ಸೋಂಕಿನ ಪ್ರಮಾಣಹೊಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಗರ್‌ವಾಲ್ ಶುಕ್ರವಾರ ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡುವ ಪ್ರಮಾಣ ಭಾರತದಲ್ಲಿ ಅತ್ಯಂತ ಕಡಿಮೆ ಇದೆ. ಗುರುವಾರ ಸುಮಾರು 16,002 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದ್ದು ಈ ಪೈಕಿ ಕೇವಲ ಶೇ. 0.2 ರಷ್ಟು ಮಾತ್ರ ಸೋಂಕು ದೃಢ ಪಟ್ಟ ಪ್ರಕರಣಗಳಾಗಿವೆ. ಸಂಗ್ರಹಿಸಿದ ಮಾದರಿಗಳನ್ನು ಆಧರಿಸಿ ನಡೆಸಿದ ಪರೀಕ್ಷೆಯಲ್ಲಿ ಸೋಂಕಿನ ಪ್ರಮಾಣ ಅತ್ಯಂತ ಕನಿಷ್ಟ ಪ್ರಮಾಣದಲ್ಲಿದೆ ಎಂದು ಅಗರ್‌ವಾಲ್ ಹೇಳಿದ್ದಾರೆ.
ಎಲ್ಲ ರಾಜ್ಯಗಳಿಗೂ ರಾಪಿಡ್ ಡಯಾಗ್ನೋಸ್ಟಿಕ್ಸ್ ಕಿಟ್‌ಗಳನ್ನು ವಿತರಿಸಲಾಗಿದೆ. ಈವರೆಗೆ ದೇಶದಲ್ಲಿ ಕೊರೊನಾ ಸಮುದಾಯ ನಡುವೆ ಪ್ರಸರಣ ನಡೆದಿಲ್ಲ. ಈ ಕುರಿತು ಚಿಂತೆ ಮಾಡುವ ಅಗತ್ಯವಿಲ್ಲ. ಆದರೆ ನಾವು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು. ದೇಶದಲ್ಲಿ ಸಾಕಷ್ಟು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ದಾಸ್ತಾನು ಹೊಂದಿದ್ದೇವೆ” ಎಂದು ವಿದೇಶಾಂಗ ಸಚಿವಾಲಯದ ಸಂಯೋಜಕ ದಮ್ಮು ರವಿ ಹೇಳಿದರು. ಹೆಚ್ಚಿನ ದೇಶಗಳು ಔಷಧಿಗಾಗಿ ಭಾರತಕ್ಕೆ ಮನವಿ ಮಾಡುತ್ತಿವೆ, ಆದರೆ ನಮ್ಮಲ್ಲಿ ಸಾಕಷ್ಟು ಔಷಧಿ ಇರುವುದರಿಂದ, ಅಗತ್ಯವಿರುವ ಇತರ ದೇಶಗಳಿಗೆ ಒದಗಿಸುತ್ತಿದ್ದೇವೆ ಎಂದು ಉತ್ತರಿಸಿದರು.
Follow us on Social media