ನವದೆಹಲಿ: ದೇಶದ ಭೂ ಪ್ರದೇಶವನ್ನು ಪ್ರಧಾನಿ ನರೇಂದ್ರ ಮೋದಿ ಚೀನಾ ದೇಶಕ್ಕೆ ಒಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನಮ್ಮ ಭೂಮಿಯ ಒಂದಿಂಚಿನ ಮೇಲೂ ಕಣ್ಣಿಡಲು ಯಾರಿಗೂ ಸಾಧ್ಯವಿಲ್ಲ, ಹಾಗೆ ಮಾಡುವ ಸಾಮರ್ಥ್ಯ ನಮ್ಮಲ್ಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ತಮ್ಮ ಟ್ವೀಟರ್ ಖಾತೆಗೆ ಟ್ಯಾಗ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ದೇಶದ ಭೂಪ್ರದೇಶವನ್ನು ಚೀನಾದ ಆಕ್ರಮಣಕ್ಕೆ ಒಪ್ಪಿಸಿದ್ದಾರೆ ಎಂದಿದ್ದಾರೆ.
ಒಂದು ವೇಳೆ ಭೂಮಿ ಚೀನಾಕ್ಕೆ ಸೇರಿದ್ದರೆ ನಮ್ಮ ಸೈನಿಕರನ್ನು ಏಕೆ ಹತ್ಯೆ ಮಾಡಿದರು? ಅವರನ್ನು ಏಲ್ಲಿ ಹತ್ಯೆ ಮಾಡಲಾಯಿತು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಗಲ್ವಾನ್ ಕಣಿವೆ ಸೇರಿದಂತೆ ಪೂರ್ವ ಲಡಾಖ್ನ ಹಲವಾರು ಪ್ರದೇಶಗಳಲ್ಲಿ ಚೀನಾದ ಮಿಲಿಟರಿ ವಾಸ್ತವ ನಿಯಂತ್ರಣ ರೇಖೆ ಬಳಿ ಭಾರತದ ಭಾಗವನ್ನು ಅತಿಕ್ರಮಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಸ್ಪಷ್ಟವಾದ ಹೇಳಿಕೆ ನೀಡಿದ್ದು, ನಮ್ಮ ಭೂಮಿಯನ್ನು ರಕ್ಷಿಸಿಕೊಳ್ಳಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಸಶ್ತ್ರ ಪಡೆಗಳು ಮಾಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ.
Follow us on Social media