ನವದೆಹಲಿ; 21 ದಿನಗಳ ಲಾಕ್’ಡೌನ್ ಮುಕ್ತಾಯಗೊಳ್ಳುತ್ತಿರುವಾಗಲೇ ಮಾರಕ ಕೊರೋನಾ ವೈರಸ್ ದೇಶದಲ್ಲಿ ಮಹಾ ಸ್ಪೋಟದ ರೂಪ ತಳೆಯುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ದೇಶದಲ್ಲಿ ಸೋಮವಾರ 839 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು, ವೈರಸ್ ಪೀಡಿತರ ಸಂಖ್ಯೆ 10,000 ಗಡಿ ಸನಿಹಕ್ಕೆ ತಲುಪುತ್ತಿದೆ.
ಇದೇ ವೇಳೆ 19 ಮಂದಿ ವೈರಸ್’ಗೆ ಸಾವಿಗೀಡಾಗಿದ್ದು, ದೇಶದಲ್ಲಿ ಮೃತಪಟ್ಟವರ ಸಂಖ್ಯೆ 324ಕ್ಕೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ಒಂದೇ ದಿನ ದಾಖಲೆಯ 356 ಮಂದಿಯಲ್ಲಿ ಹೊಸ ಸೋಂಕು ಕಂಡುಬಂದಿದ್ದರೆ, ಮಹಾರಾಷ್ಟ್ರದಲ್ಲಿ 352 ಸೋಂಕಿತರು ಪತ್ತೆಯಾಗಿದ್ದಾರೆ.
ಈ ವರೆಗೆ ಮಹಾರಾಷ್ಟ್ರದಲ್ಲಿ ಒಂದೇ ದಿನ 230 ಮಂದಿಗೆ ಸೋಂಕು ಪತ್ತೆಯಾಗಿದ್ದೇ ದಾಖಲೆಯಾಗಿತ್ತು. ಆದರೆ, ಎರಡು ಕಡೆ ಒಂದೇ ದಿನ 300ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲಾಗಿರುವುದರಿಂದ ತೀರಾ ಆತಂಕಕ್ಕೆ ಕಾರಣವಾಗಿದೆ. ಮುಂಬೈನ ಬೃಹತ್ ಕೊಳಚೆ ಪ್ರದೇಶ ಎನಿಸಿರುವ ಧಾರಾವಿಯಲ್ಲಿ ಸೋಮವಾರ 6 ಸೋಂಕಿತರು ಪತ್ತೆಯಾಗಿ ಒಬ್ಬರು ಮೃತಪಟ್ಟಿದ್ದಾರೆ. ಇಲ್ಲಿ ಒಟ್ಟು 49 ಮಂದಿ ಸೋಂಕಿತರಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಇದೇ ಮೊದಲ ಸಲ ಒಂದೇ ದಿನ 98 ಪ್ರಕರಣಗಳು ದೃಢಪಟ್ಟಿವೆ.
ಇನ್ನು ಕೆಲವೇ ದಿನಗಳಲ್ಲಿ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಅದಾದ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ. ಇದಕ್ಕೆ ಕಡಿವಾಣ ಹಾಕದೇ ಹೋದರೆ ಕೊರೋನಾ ವೈರಸ್ ದೇಶದಲ್ಲಿ 3ನೇ ಹಂತಕ್ಕೆ ವಿಸ್ತರಿಸುವ ಭೀತಿ ಹುಟ್ಟಿದೆ.
Follow us on Social media