ನವದೆಹಲಿ: ನವದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಆದರೆ 72 ಸಾವಿರ ಜನರು ಗುಣಮುಖರಾಗಿದ್ದಾರೆ ಹೀಗಾಗಿ ಜನತೆ ಆತಂಕಪಡಬೇಕಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿನ 25 ಸಾವಿರ ಸಕ್ರಿಯ ಪ್ರಕರಣಗಳಲ್ಲಿ 15 ಸಾವಿರ ಜನರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದ್ದು ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ ಎಂದರು.
ಮೊದಲ ಬಾರಿಗೆ ದೇಶದಲ್ಲಿ ಮೊದಲಿಗೆ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಿದ್ದೇವೆ. ನಮ್ಮ ಪರೀಕ್ಷಾ ವರದಿಗಳು ಪ್ಲಾಸ್ಮಾ ಥೆರೆಪಿಯಿಂದ ರೋಗಿಗಳ ಆರೋಗ್ಯ ಸುಧಾರಿಸಲಿವೆ ಎಂದರು.
ಅಗತ್ಯ ಇರುವ ಜನರಿಗಿಂತ ಕಡಿಮೆ ಜನರು ದಾನ ಮಾಡಲು ಮುಂದೆ ಬರುತ್ತಿದ್ದಾರೆ. ಜನರು ಸ್ವಯಂ ಪ್ರೇರಿತವಾಗಿ ಪ್ಲಾಸ್ಮಾ ದಾನ ಮಾಡಬೇಕು. ಇದರಿಂದಾಗಿ ಯಾವುದೇ ನೋವು, ನಿಶ್ಯಕ್ತಿ ಕಾಡುವುದಿಲ್ಲ, ಸಮಾಜಕ್ಕೆ ಇದು ನಮ್ಮ ಕೊಡುಗೆಯಾಗುತ್ತದೆ ಎಂದು ಹೇಳಿದರು.
ವೈದ್ಯಕೀಯ ತಂಡ ಜನರಿಗೆ ಪ್ಮಾಸ್ಮಾ ದಾನ ಮಾಡುವಂತೆ ಮನವಿ ಮಾಡುತ್ತಿದೆ. ಇಂತಹ ಕರೆ ನಿಮಗೆ ಬಂದರೆ ನಿರಾಕರಿಸಬೇಡಿ. ಆಸ್ಪತ್ರೆಗಳು ಸಹ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖಗೊಂಡವರಿಗೆ ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡುತ್ತಿವೆ ಎಂದು ಅವರು ಹೇಳಿದರು.
ಪ್ಲಾಸ್ಮಾ ದಾನ ಮಾಡಿದ ಬಿಜೆಪಿ ಮುಖಂಡ ಸಂಬೀತ್ ಪಾತ್ರಾ
ಕೊರೋನಾ ವೈರಸ್ ನಿಂದ ಗುಣಮುಖರಾಗಿರುವ ಬಿಜೆಪಿ ಮುಖಂಡ ಸಂಬೀತ್ ಪಾತ್ರಾ ಅವರು ಪ್ಲಾಸ್ಮಾ ರಕ್ತ ದಾನ ಮಾಡಿದ್ದು ಕೊರೋನಾದಿಂದ ಗುಣಮುಖರಾದರೂ ಪ್ಲಾಸ್ಮಾ ರಕ್ತ ದಾನ ಮಾಡುವಂತೆ ಮನವಿ ಮಾಡಿದ್ದಾರೆ.