ತುಮಕೂರು: ಉಪಚುನಾವಣೆ ಹತ್ತಿರಬರುತ್ತಿದ್ದು, ರಾಜ್ಯದ ಪ್ರಮುಖ ಮೂರು ಪಕ್ಷಗಳ ಪ್ರಚಾರ ಕಾರ್ಯ ಬಿರುಸುನಿಂದ ಸಾಗುತ್ತಿದೆ. ಈ ನಡುವಲ್ಲೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ವೈ ವಿಜಯೇಂದ್ರ ಅವರು ಶನಿವಾರ ತುಮಕೂರಿನ ಸಿದ್ದಗಂಗಾ ಮಠಕ್ಕೆ ದಿಢೀರ್ ಭೇಟಿ ನೀಡಿದ್ದು, ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಮಠಕ್ಕೆ ಭೇಟಿ ನೀಡಿರುವ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ವಿಜಯೇಂದ್ರ ಅವರು, ನಾಡಿನೆಲ್ಲೆಡೆ ದಸರಾ ನಿಮಿತ್ತ ವಿಶೇಷ ಪೂಜೆ, ಆಚರಣೆ ನಡೆಯುತ್ತಿದ್ದು, ಈ ಪವಿತ್ರ ಸಂದರ್ಭದಲ್ಲಿ ಇಂದು ಬೆಳಗ್ಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರಿಂದ ಆಶೀರ್ವಾದ ಪಡೆಯಲಾಯಿತು ಎಂದು ಹೇಳಿದ್ದಾರೆ.
ಮಠಕ್ಕೆ ಭೇಟಿ ನೀಡಿರುವುದಕ್ಕೂ ರಾಜ್ಯ ನಾಯಕತ್ವ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವುದು, ಶನಿವಾರ ಸಿಟಿ ರೌಂಡ್ಸ್ ನಡೆಸಿರುವುದೆಲ್ಲವನ್ನು ಗಮನಿಸಿದರೆ, ಓವರ್ ಟೈಮ್ ಕೆಲಸ ಮಾಡಿ ಮುಖ್ಯಮಂತ್ರಿಗಳು ತಾವು ಫಿಟ್ ಆ್ಯಂಡ್ ಫೈನ್ ಆಗಿದ್ದೇನೆಂಬುದನ್ನು ಸಾಬೀತುಪಡಿಸಲು ಹೊರಡಿದ್ದಾರೆಂದು ವಿರೋಧ ಪಕ್ಷಗಳು ಟೀಕಿಸುತ್ತಿದ್ದಾರೆ.
ಈ ನಡುವೆ ನಿನ್ನೆ ಕೂಡ ಮುಖ್ಯಮಂತ್ರಿಗಳು ಆಗ್ನೇಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು ಬಳಿಕ ಬೆಂಗಳೂರಿಗೆ ವಾಪಸ್ಸಾಗಿದ್ದರು. ಆದರೆ, ಈ ವೇಳೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿರಲಿಲ್ಲ.
ಈ ನಡುವೆ ಕಾಂಗ್ರೆಸ್ ಎಂಎಲ್’ಸಿ ಬಿಕೆ ಹರಿಪ್ರಸಾದ್ ಅವರು ಮಾತನಾಡಿ, ಉಪಚುನಾವಣೆಯ ಫಲಿತಾಂಶವನ್ನು ಆಧರಿಸಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿರಿಸುವ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರು ಇಳಿದ ಬಳಿಕ ಪಕ್ಷದಲ್ಲಿ ಮಾರ್ಗದರ್ಶಕ ಮಂಡಳಿಯಲ್ಲಿ ಸ್ಥಾನ ಪಡೆಯಲಿದ್ದಾರೆ. ಈ ನಡುವೆ 30 ಬಿಜೆಪಿ ಶಾಸಕರು ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆಂದು ತಿಳಿಸಿದ್ದಾರೆ.
Follow us on Social media