ಬೆಂಗಳೂರು : 75 ವರ್ಷದ ಉದ್ಯಮಿಯೊಬ್ಬರಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಹಾಗೂ ದೇವರ ವಿಗ್ರಹದ ಮೇಲೆ ಹೊದಿಸಲಾದ ಬಟ್ಟೆಗಳನ್ನು ಕೊಡಿಸುವುದಾಗಿ ಹೇಳಿ ಬರೋಬ್ಬರಿ 45 ಲಕ್ಷ ರೂಪಾಯಿ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಬ್ಬರು ದುಷ್ಕರ್ಮಿಗಳಿಂದ ಮೋಸ ಹೋಗಿರುವ ಉದ್ಯಮಿ ಮಾಧವ್ ರಾವ್ ಅವರು, ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಮೈಸೂರು ನಿವಾಸಿಗಳಾದ ರಘುರಾಮ್ ಎಂಜಿ ಮತ್ತು ಆತನ ಸ್ನೇಹಿತ ಶೇಷಾಂದ್ರಿ ಅವರು ದೇವಸ್ಥಾನದ ಟ್ರಸ್ಟಿಗಳು ತಮಗೆ ಆಪ್ತರಾಗಿದ್ದು, ಅವರ ಮೂಲಕ ತಿರುಪತಿಯಲ್ಲಿ ವಿಶೇಷ ದರ್ಶನ, ವಿಗ್ರಹದ ಮೇಲಿನ ರೇಷ್ಮೆ ಬಟ್ಟೆ ಮತ್ತು ಜಿಂಕೆ ಚರ್ಮದಿಂದ ತಯಾರಿಸಿದ ಬ್ಯಾಗ್ ಕೊಡಿಸುವುದಾಗಿ ಭರಸೆ ನೀಡಿದ್ದರು. ಈ ಸಂಬಂಧ ನಾನು ಅವರ ಖಾತೆಗೆ 45 ಲಕ್ಷ ರೂಪಾಯಿ ವರ್ಗಾವಣೆ ಮಾಡಿದೆ ಎಂದು ಮಾಧವರ್ ರಾವ್ ಅವರು ಆರೋಪಿಸಿದ್ದಾರೆ.
2018ರಲ್ಲಿ ನಾನು ಮತ್ತು ನನ್ನ ಪತ್ನಿ ತಿರುಪತಿಗೆ ತೆರಳಿದ್ದೇವೆ. ಅಲ್ಲಿ ರಘುರಾಮ್ ಅವರು ನನಗೆ ಭೇಟಿಯಾದರು. ಆತ ತನ್ನ ಕೆಲವು ಸಂಬಂಧಿಗಳನ್ನು ನನಗೆ ಪರಿಚಯಿಸಿದ. ನಂತರ ವಿಶೇಷ ದರ್ಶನ ಮತ್ತು ವಿಗ್ರಹದ ಮೇಲಿನ ಬಟ್ಟೆಗಾಗಿ ಹಣ ಕೇಳಿದರು. ಅದರಂತೆ ನಾನು ಹಣ ವರ್ಗಾವಣೆ ಮಾಡಿದೆ. ಆದರೆ ನಂತರ ರಘುರಾಮ್ ಅವರು ತನ್ನ ಸ್ನೇಹಿತ ಶೇಷಾಂದ್ರಿ ಜತೆ ಜಿಂಕೆಚರ್ಮದ ಬ್ಯಾಗ್ ಕಳುಹಿಸಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇಸ್ ನಿಂದ ಹೊರಬರಲು ಹೆಚ್ಚಿನ ಹಣ ನೀಡುವಂತೆ ನನಗೆ ಒತ್ತಾಯಿಸಿದರು ಎಂದು ರಾವ್ ದೂರಿನಲ್ಲಿ ತಿಳಿಸಿದ್ದಾರೆ.
ಅನುಮಾನಗೊಂಡ ರಾವ್ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
Follow us on Social media