Breaking News

ತಮಿಳುನಾಡು ರಾಜಕೀಯಕ್ಕೆ ಅಣ್ಣಾಮಲೈ ಎಂಟ್ರಿ

ಬೆಂಗಳೂರು : ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ರಾಜೀನಾಮೆ ನೀಡಿರುವ ‘ಸಿಂಗಂ’ ಖ್ಯಾತಿಯ ಅಣ್ಣಾಮಲೈ, ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 2021ರ ಏಪ್ರಿಲ್‌ನಲ್ಲಿ ಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಣ್ಣಾಮಲೈ ತಯಾರಿ ನಡೆಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಘೋಷಿಸಿರುವ ಕೆ. ಅಣ್ಣಾಮಲೈ, ಅದಕ್ಕಾಗಿ ತಮಿಳುನಾಡಿನಲ್ಲಿರುವ ತಮ್ಮ ಊರಿನಲ್ಲಿ ಇದ್ದುಕೊಂಡೇ ಕೆಲಸ ಆರಂಭಿಸಿರುವುದಾಗಿ ಹೇಳಿದ್ದಾರೆ. ಫೇಸ್‌ಬುಕ್‌ನಲ್ಲಿ ಭಾನುವಾರ ಸಂಜೆ ನೇರಪ್ರಸಾರದಲ್ಲಿ (ಲೈವ್) ಮಾತನಾಡಿದ ಅಣ್ಣಾಮಲೈ, ತಮ್ಮ ಭವಿಷ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. 

‘ಮಿಸ್ ಯೂ ಕರ್ನಾಟಕ’ ಎಂದೇ ಮಾತು ಆರಂಭಿಸಿದ ಅಣ್ಣಾಮಲೈ, ‘ಕರ್ನಾಟಕದ ಜನ ಪ್ರೀತಿ ಕೊಟ್ಟರು. ಅವರ ಪ್ರೀತಿಗೆ ನಾನು ಅಭಾರಿ. ನನ್ನದೇ ಹಲವು ಆಲೋಚನೆಗಳು ಇವೆ. ಜನರ ಜೊತೆಗೆ ಇದ್ದು ರಾಜಕೀಯ ವ್ಯವಸ್ಥೆ ಸುಧಾರಣೆ ಮಾಡುವ ಆಸೆ ಇದೆ. ಹೀಗಾಗಿ, ರಾಜೀನಾಮೆ ನೀಡಿ ಸ್ವಂತ ಊರಿಗೆ ಬಂದಿದ್ದೇನೆ’ ಎಂದರು.

‘ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ 10 ವರ್ಷ ಕೆಲಸ ಮಾಡಿದ್ಧೇನೆ. ಅಷ್ಟು ಸಾಕು ನನಗೆ. ಮುಂದೆ ನನ್ನ ಆಲೋಚನೆ ಹಾಗೂ ಗುರಿಯೇ ಬೇರೆ ಇದೆ. ಕುಟುಂಬದ ಜೊತೆ ಸಮಯ ಕಳೆಯಬೇಕು. ಕೃಷಿ ಮಾಡಬೇಕು. ತಮಿಳುನಾಡು ರಾಜಕೀಯಕ್ಕೆ ಹೋಗಬೇಕು. ವ್ಯವಸ್ಥೆ ಬದಲಾವಣೆ ಮಾಡಬೇಕು. ಕೆಲಸ ಮಾಡುವ ಅಧಿಕಾರಿಗಳಿಗೆ ಒಳ್ಳೆಯ ವಾತಾವರಣ ಕಲ್ಪಿಸಿಕೊಡಬೇಕು ಎಂಬ ಆಸೆ ಇದೆ. ಅದಕ್ಕೆ ತಕ್ಕಂತೆ ಶ್ರಮ ಪಡುತ್ತಿದ್ದೇನೆ’ ಎಂದು ಅಣ್ಣಾಮಲೈ ಹೇಳಿದರು.

ಮದ್ಯದ ಆದಾಯಕ್ಕೆ ಪರ್ಯಾಯವಾದ ಆದಾಯ ಸೃಷ್ಟಿಸಿ; ಮದ್ಯ ಮಾರಾಟ ನಿಷೇಧದ ಬಗ್ಗೆ ಮಾತನಾಡಿದ ಅಣ್ಣಾಮಲೈ, ‘ಎಲ್ಲ ಸರ್ಕಾರಗಳೂ ಆರ್ಥಿಕ ನಿರ್ವಹಣೆಯನ್ನೂ ಹಳೇ ಪದ್ಧತಿಯಲ್ಲೇ ಕಳಪೆಯಾಗಿ ನಿರ್ವಹಣೆ ಮಾಡುತ್ತಿವೆ. ಹೀಗಾಗಿಯೇ ಮದ್ಯದ ಆದಾಯವನ್ನೇ ನೆಚ್ಚಿಕೊಂಡು ಇಂದಿಗೂ ಬಜೆಟ್ ಮಾಡುತ್ತಿವೆ’ ಎಂದರು.

‘ಕರ್ನಾಟಕದಲ್ಲಿ 21 ಸಾವಿರ ಕೋಟಿ ಮದ್ಯದ ಆದಾಯವಿದೆ. ಯಾವ ಸರ್ಕಾರವೂ ಮದ್ಯದ ಆದಾಯ ಬೇಡ ಎನ್ನುವುದಿಲ್ಲ.  ಇದು ತಪ್ಪಾ? ಸರಿಯಾ? ಎಂಬುದನ್ನು ಹೇಳಲಾಗದು. ಆದರೆ, ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ತಪ್ಪು. ಮದ್ಯದಿಂದ ಕೆಟ್ಟದ್ಧೇ ಜಾಸ್ತಿ ಆಗುತ್ತದೆ. ಒಳ್ಳೆಯದು ಕಡಿಮೆ’ ಎಂದರು.

‘ಪ್ರತಿ ವರ್ಷವೂ ಮದ್ಯದ ಆದಾಯ ಹೆಚ್ಚಿಸುವಂತೆ ಆಯಾ ಜಿಲ್ಲಾಧಿಕಾರಿ ಮೇಲೆ ಸರ್ಕಾರ ಒತ್ತಡ ಹಾಕುತ್ತದೆ. ಆದಾಯ ಜಾಸ್ತಿ ಆಗದಿದ್ದರೆ, ಜಿಲ್ಲಾಧಿಕಾರಿಯನ್ನು ಸರ್ಕಾರ ಸರಿಯಾಗಿ ನೋಡುವುದಿಲ್ಲ’ ಎಂದರು.  

‘ಸರ್ಕಾರ ಹಳೆ ಮದ್ಯದ ಆದಾಯ ಬಿಟ್ಟು ಹೊಸ ಆದಾಯ ಸೃಷ್ಟಿಸುವತ್ತ ಗಮನಹರಿಸಬೇಕು. ಅಂಥ ಹೊಸ ಆಲೋಚನೆಗಾಗಿ ಒಳ್ಳೆಯ ಸರ್ಕಾರ ಬೇಕು. ಯುವಕರೆಲ್ಲ ಸೇರಿ ರಾಜಕೀಯ ವ್ಯವಸ್ಥೆ ಸರಿ ಮಾಡಬೇಕು. ಯಾರು ಶಾಸಕರು, ಸಂಸದರು ಆಗಬೇಕೆಂದು ನಿರ್ಧರಿಸಬೇಕು. ಅವರು ಹೇಗೆ ಕೆಲಸ ಮಾಡುತ್ತಾರೆ. ಅಸೆಂಬ್ಲಿಯಲ್ಲಿ ಏನು ಮಾತನಾಡುತ್ತಾರೆ. ಎಲ್ಲವನ್ನೂ ನೋಡಬೇಕು’ ಎಂದೂ ಹೇಳಿದರು.

‘ಈಗಿನ ಶಾಸಕರು ನಮ್ಮ ಕ್ಷೇತ್ರಕ್ಕೆ ಇಷ್ಟು ಬೇಕು. ಅಷ್ಟು ಬೇಕು ಎನ್ನುತ್ತಾರೆ. ಅದಕ್ಕಾಗಿ ಸರ್ಕಾರ ಮದ್ಯ ಸೇರಿ ಇತರೆಡೆಯಿಂದ ಆದಾಯ ತಂದು ಹಂಚುತ್ತಿದೆ. ಇದೇ ವ್ಯವಸ್ಥೆ ಬದಲಾಗಬೇಕು’ ಎಂದು ಹೇಳಿದರು.

ಪರೀಕ್ಷೆಯೇ ಜೀವನದಲ್ಲ; ‘ಎಲ್ಲರೂ ಐಎಎಸ್, ಐಪಿಎಸ್ ಆಗಬೇಕು ಎಂದರೆ ಹೇಗೆ? ಪರೀಕ್ಷೆಯೇ ಜೀವನಲ್ಲ. ಬದುಕು ದೊಡ್ಡದು ಇದೆ. ಪ್ರತಿಯೊಂದು ಕ್ಷೇತ್ರದಲ್ಲೂ ಅವಕಾಶಗಳು ಇವೆ. ಅವುಗಳನ್ನು ಬಳಸಿಕೊಂಡು ಮುನ್ನುಗಿ. ಬೇರೆಯವರಿಗೂ ಕೆಲಸ ಕೊಡುವ ಮಟ್ಟಕ್ಕೆ ಬೆಳೆಯಿರಿ’ ಎಂದರು.

‘ಕೆಲಸವೇ ಜೀವನವಲ್ಲ. ಕುಟುಂಬ, ಸ್ನೇಹಿತರ ಜೊತೆ ಕಾಲ ಕಳೆಯಿರಿ. ಬದುಕಿನ ಕೊನೆಯಲ್ಲಿ ಸಾಯುವಾಗ ಯಾರದರೂ ಐದು ಖುಷಿ ವಿಷಯ ಯಾವುದು ಎಂದು ಕೇಳಿದರೆ, ತಂದೆ–ತಾಯಿ, ಕುಟುಂಬದ ಬಗ್ಗೆಯೇ ಹೇಳಬೇಕು. ಅದನ್ನು ಬಿಟ್ಟು ಆ ಪರೀಕ್ಷೆ ಈ ಪರೀಕ್ಷೆ ಎಂದು ಹೇಳುವುದಲ್ಲ’ ಎಂದರು.

‘ಯಾವುದೇ ಪರೀಕ್ಷೆ ಬರೆದರೂ ತಾಳ್ಮೆಯಿಂದ ಧೈರ್ಯವಾಗಿ ಎದುರಿಸಿ. ಪರೀಕ್ಷೆ ಪಾಸ್ ಆಗದಿದ್ದರೂ ಭಯಬೇಡ. ನಿಮಗೆ ಮತ್ತೊಂದು ಕ್ಷೇತ್ರ ಕಾಯುತ್ತಿರುತ್ತದೆ. ಸಮಾಜಕ್ಕೆ ಐಎಎಸ್, ಐಪಿಎಸ್‌ ಅಧಿಕಾರಿ ರೀತಿಯಲ್ಲೇ ರೈತರು, ಸಮಾಜ ಕಾರ್ಯಕರ್ತರು, ಉದ್ಯಮಿಗಳು ಎಲ್ಲರೂ ಬೇಕು. ಹೀಗಾಗಿ, ವಿಶಾಲವಾಗಿ ಯೋಚಿಸಿ ಸಾಧನೆ ಮಾಡಿ’ ಎಂದು ಅಣ್ಣಾಮಲೈ ಹೇಳಿದರು.

ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯಾಗಬೇಕು: ‘ಕೊರೊನಾ ಲಾಕ್‌ಡೌನ್‌ ಮುಗಿದ ಮೇಲೆ ಬೇಗನೇ ಬೆಳೆಯುವ ಕ್ಷೇತ್ರ ಕೃಷಿ ಮಾತ್ರ. ಅದುವೇ ಭಾರತದ ಜೀವ. ಆದರೆ, ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಬೇಕಿದೆ. ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ತಿಳಿಸಿದರು.

ವ್ಯಕ್ತಿ ಆಧಾರಿತವಲ್ಲದ ವ್ಯವಸ್ಥೆ ಬೇಕು: ‘ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಬೇಕು. ಯುವಕರು ರಾಜಕೀಯ ಪ್ರವೇಶಿಸಬೇಕು’ ಎಂದರು.

‘ನಮ್ಮ ಜನಪ್ರತಿ ಒಂದೇ ರೀತಿಯಲ್ಲಿರಬೇಕು. ಮತದಾರರ ಮುಂದೆ ಒಂಥರಾ, ಕಚೇರಿಯಲ್ಲಿ ಮತ್ತೊಂತರಾ, ಅಸೆಂಬ್ಲಿಯಲ್ಲಿ ಇನ್ನೊಂತರ ಇರಬಾರದು. ಚುನಾವಣೆ ಖರ್ಚು ಹೆಚ್ಚಾಗಿದೆ. ಹಣ ಇದ್ದವನೇ ಚುನಾವಣೆಗೆ ನಿಲ್ಲುವ ಸ್ಥಿತಿ ಇದೆ. ಇದಕ್ಕೆ ಕಡಿವಾಣ ಹಾಕಬೇಕು. ವ್ಯಕ್ತಿ ಆಧಾರಿತವಲ್ಲದ ವ್ಯವಸ್ಥೆ ಇರಬೇಕು’ ಎಂದು ಹೇಳಿದರು.

ಇಲಾಖೆಯಲ್ಲಿ ಒತ್ತಡ ಇದೆ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ತಮ್ಮ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುತ್ತಾರೆ. ಅಂಥ ಜನಪ್ರತಿನಿಧಿಗಳು ಪೊಲೀಸ್ ಇಲಾಖೆ ಮೇಲೆ ಒತ್ತಡ ಹಾಕುವುದು ಸಹಜ. ಇಲಾಖೆಯಲ್ಲೂ ರಾಜಕೀಯ ಒತ್ತಡ ಇದ್ದೇ ಇರುತ್ತದೆ. ಆದರೆ, ಅದು ತಪ್ಪಲ್ಲ. ಜನಪರವಾಗಿರಬೇಕು’ ಎಂದು ಅಣ್ಣಾಮಲೈ ತಿಳಿಸಿದರು. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×