ವಿರುಧುನಗರ: ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಮತ್ತು 2ದ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಮಧ್ಯಾಹ್ನ ತಮಿಳುನಾಡಿನ ವೆಂಬಕೊಟ್ಟೈ ನ ಕೊಟ್ಟೈಪಾಟಿಯಲ್ಲಿರುವ ಅಚಂಕುಲಂನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ 13 ಮಂದಿಯ ಪೈಕಿ 9 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸಟ್ಟೂರ್ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತದೇಹಗಳು ಸಂಪೂರ್ಣ ಸುಟ್ಟಿರುವುದರಿಂದ ಗುರುತು ಪತ್ತೆ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಘಟನೆ ವರದಿಯಾದ ಬೆನ್ನಲ್ಲೇ ಮೂರು ಅಗ್ನಿಶಾಮಕ ವಾಹನಗಳೊಂದಿಗೆ, 30 ರಕ್ಷಣಾ ಸಿಬ್ಬಂದಿಗಳು ಹಾಗೂ ಐವರು ಅಧಿಕಾರಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಸ್ಫೋಟದಲ್ಲಿ 10 ಕೋಠಡಿಗಳು ನಾಶವಾಗಿದ್ದು, ಘಟನೆ ನಡೆದಾಗ ಕನಿಷ್ಟ 50 ಮಂದಿ ಕಾರ್ಮಿಕರು ಒಳಗಡೆ ಇದ್ದರು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗಣೇಶನ್ ಹೇಳಿದ್ದಾರೆ.
ಘಟನೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ಮೂಲಗಳ ಪ್ರಕಾರ ಯುನಿಟ್ ನ್ನು ಹಲವು ಮಂದಿ ಗುತ್ತಿಗೆದಾರರಿಗೆ ಅಕ್ರಮವಾಗಿ ನೀಡಲಾಗಿದ್ದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.
Follow us on Social media