ನವದೆಹಲಿ: ಎರಡನೇ ಹಂತದ ರಫೇಲ್ ಯುದ್ಧ ವಿಮಾನಗಳು ಬುಧವಾರ ರಾತ್ರಿ ಭಾರತಕ್ಕೆ ಬಂದಿಳಿವೆ. ಮೂರು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ತಡೆ ರಹಿತ ಹಾರಾಟದೊಂದಿಗೆ ಬುಧವಾರ ರಾತ್ರಿ 8.14ಕ್ಕೆ ಭಾರತ ಪ್ರವೇಶಿಸಿರುವುದಾಗಿ ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.
ಮೂರು ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ಎಂಟು ಗಂಟೆಗಳ ಹಾರಾಟ ನಡೆಸಿ ಐಎಎಫ್ ವಾಯುನೆಲೆಗೆ ಬಂದಿಳಿದಿವೆ. ಅವುಗಳು ಸುಮಾರು 3700 ನಾಟಿಕಲ್ ಮೈಲಿಗಳನ್ನು ಕ್ರಮಿಸಿರುವುದಾಗಿ ಭಾರತೀಯ ವಾಯುಪಡೆ ಹೇಳಿದೆ.
ಎರಡನೇ ಹಂತದ ರಫೇಲ್ ಯುದ್ಧ ವಿಮಾನಗಳಿಗೆ ಫ್ರೆಂಚ್ ವಾಯುಪಡೆ ನೀಡಿರುವ ಸಹಕಾರವನ್ನು ಭಾರತೀಯ ವಾಯುಪಡೆ ಪ್ರಶಂಸಿಸಿದೆ. ಎರಡನೇ ಹಂತದಲ್ಲಿ ಬಂದಿರುವ ಮೂರು ರಫೇಲ್ ಯುದ್ಧ ವಿಮಾನಗಳೊಂದಿಗೆ ಭಾರತೀಯ ವಾಯುಪಡೆ ಇದೀಗ ಎಂಟು ರಫೇಲ್ ಯುದ್ಧ ವಿಮಾನಗಳನ್ನು ಹೊಂದಂತಾಗಿದೆ.
ಫ್ರಾನ್ಸ್ ನಿಂದ 59 ಸಾವಿರ ಕೋಟಿ ವೆಚ್ಚದಲ್ಲಿ 36 ಯುದ್ಧ ವಿಮಾನಗಳನ್ನು ಖರೀದಿಸಿಲು ಭಾರತ ಸರ್ಕಾರ ಫ್ರಾನ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಸುರಕ್ಷಿತವಾಗಿ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿರುವುದಕ್ಕೆ ಭಾರತೀಯ ವಾಯುಪಡೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.
ಚೀನಾದೊಂದಿಗೆ ಗಡಿ ಸಂಘರ್ಷ ಮುಂದುವರೆದಿರುವಂತೆ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿರುವುದು ಭಾರತೀಯ ಸೇನೆಯ ಬಲವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
Follow us on Social media