ಬೆಂಗಳೂರು: ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲು ಭಾನುವಾರ ನವದೆಹಲಿಗೆ ತೆರಳಿದ್ದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ತನ್ನ ಪ್ರಯಾಣವನ್ನು ಮೊಟಕುಗೊಳಿಸಿ ಸೋಮವಾರ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರ ನಾಯಕರನ್ನು ಭೇಟಿಯಾಗಲೆಂದು ಬೆಳಗಾವಿ ಸಾಹುಕಾರ್ ದೆಹಲಿಗೆ ಹೋಗಿದ್ದರು. ಅಮಿತ್ ಶಾಗೆ ಭಾನುವಾರ ಕೊರೋನಾ ದೃಢಪಟ್ಟಿದ್ದು, ಕೇಂದ್ರ ಸಚಿವರು ಸೇರಿದಂತೆ ಹಲವು ನಾಯಕರು ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ ಜಾರಕಿಹೊಳಿ ಸೋಮವಾರ ರಾಜ್ಯಕ್ಕೆ ಹಿಂತಿರುಗಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಕೂಡಾ ರಮೇಶ್ ಜಾರಕಿಹೊಳಿ ಪ್ರಯಾಣ ಮೊಟಕುಗೊಳ್ಳುವಲ್ಲಿ ಕಾರಣವಾಗಿದೆ. ಎಲ್ಲಾ ಭೇಟಿ ಮುಂದೂಡಲಾಗಿದೆ. ಆದರೆ, ಜಲ ಸಂಪನ್ಮೂಲ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಕಾನೂನು ತಂಡ ಮತ್ತು ತಾಂತ್ರಿಕ ತಜ್ಞರೊಂದಿಗೆ ಸಚಿವರು ಸಭೆ ನಡೆಸಿದ್ದಾರೆ.
ಮುಂದಿನ ವಾರ ಮತ್ತೆ ನವದೆಹಲಿಗೆ ರಮೇಶ್ ಜಾರಕಿಹೊಳಿ ತೆರಳಲಿದ್ದು, ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೇರಿದಂತೆ ಹಲವು ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ ಎಂಬುದು ಜಾರಕಿಹೊಳಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಭೇಟಿ ಬೆನ್ನಲ್ಲೇ ದೆಹಲಿಗೆ ತೆರಳಿದ್ದ ಜಾರಕಿಹೊಳಿ, ತನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಹಾಗೂ ತಮ್ಮ ಗುಂಪಿನ ಹೆಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಅವರಿಗೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ವರಿಷ್ಠರ ಮೇಲೆ ಒತ್ತಡ ಹೇರುವ ಸಲುವಾಗಿ ನವದೆಹಲಿಗೆ ತೆರಳಿದ್ದರು ಎಂಬುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
Follow us on Social media