ನ್ಯೂಯಾರ್ಕ್: ಜಾಗತಿಕ ಟೆಲಿಕಾಂ ಸಂಸ್ಥೆಗಳು ಭಾರತದ ಜಿಯೋ ಮಾದರಿಯನ್ನು ಅನುಸರಿಸಬೇಕು ಎಂದು ಅಮೆರಿಕಾ ಅಭಿಪ್ರಾಯಪಟ್ಟಿದೆ.
ಇಡಿ ಜಗತ್ತು ಈಗ 5 ಜಿ ನೆಟ್ವರ್ಕ್ ಬಗ್ಗೆ ಮಾತನಾಡುತ್ತಿದ್ದು, ಚೀನಾದ ಮೇಲಿನ ಟೆಲಿಕಾಂ ಉಪಕರಣಗಳ ಮೇಲಿನ ಅವಲಂಬನೆಯನ್ನು ಮೆಟ್ಟಿ 5 ಜಿ ನೆಟ್ವರ್ಕ್ ಗುರಿ ಸಾಧಿಸುವ ಬಗ್ಗೆಯೂ ಗಂಭೀರ ಚಿಂತನೆಗಳು ನಡೆಯುತ್ತಿವೆ. ಈ ಬೆಳವಣಿಗೆಗಳ ನಡುವೆ ಜಿಯೋ ಸಂಸ್ಥೆಯ ಇತ್ತೀಚಿನ ಘೋಷಣೆ, ನಡೆಗಳನ್ನು ಅಮೆರಿಕ ಜಗತ್ತಿಗೇ ಮಾದರಿ ಎಂದಿರುವುದು ಮಹತ್ವ ಪಡೆದುಕೊಂಡಿದೆ.
ಜಾಗತಿಕ ಟೆಲಿಕಾಂ ಸಂಸ್ಥೆಗಳನ್ನು ಚೀನಾದ ಅವಲಂಬನೆ, ಹೂಡಿಕೆಯಿಂದ ಹೊರಸೆಳೆಯಲು ಯತ್ನಿಸುತ್ತಿರುವ ಸೈಬರ್ ರಾಯಭಾರಿ ( ಸೈಬರ್ ಡಿಪ್ಲೊಮಾಟ್) ರಾಬರ್ಟ್ ಎಲ್. ಸ್ಟ್ರೇಯರ್ “5ಜಿ ದೊಡ್ಡ ಅತೀಂದ್ರಿಯ ವಿಷಯವೇನಲ್ಲ ಎಂಬ ಪಾಠವನ್ನು ಜಿಯೋ ಕಲಿಸಿದೆ. 4ಜಿ ತಂತ್ರಜ್ಞಾನದ ಕಾಂಪೊನೆಂಟ್ ಗಳನ್ನೇ 5 ಜಿ ಸಹ ಹೊಂದಿರಲಿದೆ, ಆದರೆ ಬೇರೆ ಹಂತಕ್ಕೆ ವಿಕಸನಗೊಂಡಿರಲಿದೆಯಷ್ಟೇ ಎಂದು ರಾಬರ್ಟ್ ಎಲ್ ಸ್ಟ್ರೇಯರ್ ತಿಳಿಸಿದ್ದನ್ನು ಐಎಎನ್ಎಸ್ ವರದಿ ಮಾಡಿದೆ.
ಜಾಗತಿಕ ಟೆಲಿಕಾಂ ಸಂಸ್ಥೆಗಳು 5 ಜಿ ಗಾಗಿ ಹುವಾಯಿ ಸೇರಿದಂತೆ ಚೀನಾದ ವಿಶ್ವಾಸಾರ್ಹವಲ್ಲದ ಟೆಲಿಕಾಂ ಉಪಕರಣಗಳ ಸಂಸ್ಥೆಗಳ ಮೇಲೆ ಅವಲಂಬಿತವಾಗುವ ಬದಲು ಜಿಯೋ ಮಾದರಿಯಲ್ಲಿ ದೇಶೀಯವಾಗಿ 5 ಜಿ ತಂತ್ರಜ್ಞಾನ ಅಭಿವೃದ್ಧಿಗೆ ಮುಂದಾಗಬೇಕು, ಜಿಯೋ ಮಾದರಿಯನ್ನು ಅನುಸರಿಸಬೇಕೆಂದು ರಾಬರ್ಟ್ ಎಲ್. ಸ್ಟ್ರೇಯರ್ ಅಭಿಪ್ರಾಯಪಟ್ಟಿದ್ದಾರೆ.
ಜುಲೈ.15 ರಂದು ರಿಲಾಯನ್ಸ್ ನ 43 ನೇ ಸಾಮಾನ್ಯ ಸಭೆಯಲ್ಲಿ ಮುಖೇಶ್ ಅಂಬಾನಿ ಮೇಡ್-ಇನ್-ಇಂಡಿಯಾ 5 ಜಿ ಸೊಲ್ಯೂಷನ್ಸ್ ನ್ನು ಘೋಷಿಸಿದ್ದರು.
ಏರ್ ಟೆಲ್, ವೋಡಾಫೋನ್, ಐಡಿಯ, ಬಿಎಸ್ಎನ್ಎಲ್ ಗಳೂ ಸಹ ಚೀನಾದ ಮೇಲಿನ ಅವಲಂಬನೆಯನ್ನು ಬಿಡಬೇಕೆಂದು ರಾಬರ್ಟ್ ಎಲ್. ಸ್ಟ್ರೇಯರ್ ಹೇಳಿದ್ದಾರೆ. 5 ಜಿ ಅಭಿವೃದ್ಧಿಪಡಿಸುವಲ್ಲಿ ವಿಶ್ವಾಸಾರ್ಹ ಸಂಸ್ಥೆಗಳೊಂದಿಗೆ ಮಾತ್ರ ವ್ಯವಹರಿಸುವುದಾಗಿ ಹೇಳಿರುವ ಸ್ಪೇನ್ ನ ಟೆಲಿಫೋನಿಕಾ, ಫ್ರಾನ್ಸ್ ನ ಆರೆಂಜ್, ಭಾರತದ ಜಿಯೋ, ಆಸ್ಟ್ರೇಲಿಯಾದ ಟೆಲ್ಸ್ಟ್ರಾ, ದಕ್ಷಿಣ ಕೊರಿಯಾದ ಎಸ್ ಕೆ, ಕೆಟಿ, ಜಪಾನ್ ನ ಎನ್ ಟಿಟಿ ಟೆಲಿಕಾಂ ಸಂಸ್ಥೆಗಳ ಬಗ್ಗೆ ಅಮೆರಿಕ ಮೆಚ್ಚುಗೆ ವ್ಯಕ್ತಪಡಿಸಿದೆ.
ಸ್ಟ್ರೇಯರ್ ಹೇಳಿಕೆಗೂ ಮುನ್ನ ಅಮೆರಿಕ ಸಚಿವ ಮೈಕ್ ಪೋಂಪಿಯೋ ಸಹ ಜಾಗತಿಕ ಟೆಲಿಕಾಂ ಸಂಸ್ಥೆಗಳು ಭಾರತದ ಜಿಯೋ ಮಾದರಿಯನ್ನು ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.
Follow us on Social media