ಮೊರ್ಬಿ : ಮೊರ್ಬಿ ತೂಗುಸೇತುವೆ ದುರಸ್ತಿ ನಿರ್ವಹಣೆಯ ಜವಾಬ್ದಾರಿ ಹೊತ್ತವರನ್ನು ರಕ್ಷಿಸುವ ಪ್ರಯತ್ನವಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಆರೋಪಿಸಿದ್ದಾರೆ.
- ಗುಜರಾತ್ನ ಮೊರ್ಬಿ ಜಿಲ್ಲೆಯ ವಂಕನೇರ್ ಪಟ್ಟಣದಲ್ಲಿ ರೋಡ್ಶೋದಲ್ಲಿ (ತಿರಂಗ ಯಾತ್ರೆ) ಭಾನುವಾರ ಮಾತನಾಡಿದ ಅವರು, ಎಎಪಿ ಗುಜರಾತ್ನಲ್ಲಿ ಅಧಿಕಾರ ಹಿಡಿದರೆ ಖಂಡಿತವಾಗಿಯೂ ಗುಣಮಟ್ಟದ ಸೇತುವೆಯನ್ನು ನಿರ್ಮಿಸಲಿದೆ. ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಇಂತಹ ಘಟನೆ ನಿರಂತರ. ದುರಂತಕ್ಕೆ ಕಾರಣರಾದವರ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.ಕಾರಣಕರ್ತರನ್ನು ರಕ್ಷಿಸುವ ಪ್ರಯತ್ನವೇಕೆ? ಅವರೊಂದಿಗಿನ ನಿಮ್ಮ ಸಂಬಂಧವೇನು ಎಂದು ಕೇಜ್ರೀವಾಲ್ ಇದೇ ವೇಳೆ ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.ಹೊಸ ಎಂಜಿನ್ ಸರ್ಕಾರದ ಅವಶ್ಯಕತೆ ನಮಗಿದೆಯೇ ಹೊರತು ಡಬಲ್ ಎಂಜಿನ್ ಸರ್ಕಾರವಲ್ಲ. ಡಬಲ್ ಎಂಜಿನ್ ಹಳೆದಾಗಿದ್ದು, ನಾಶವಾಗಿದೆ. ಶಿಕ್ಷಣ, ಆರೋಗ್ಯ, ಉದ್ಯೋಗದಲ್ಲಿ ಸುಧಾರಣೆ ಕಾಣಬೇಕಾದರೆ ಸರ್ಕಾರ ಬದಲಾವಣೆಯ ಅವಶ್ಯಕತೆಯಿದೆ. ದೆಹಲಿಯಲ್ಲಿ ಎಎಪಿ ಸರ್ಕಾರ ಜನರಿಗೆ ನೀಡಿದ ಭರವಸೆಯನ್ನು ಹೇಗೆ ಈಡೇರಿಸಲಾಗಿದೆ ಎಂಬುದು ಜನರಿಗೆ ಗೊತ್ತು. 15 ಲಕ್ಷ ರೂಪಾಯಿ ನೀಡುತ್ತೇನೆ ಎಂಬ ಭರವಸೆಯನ್ನು ನಾನು ಎಂದಿಗೂ ನೀಡುವುದಿಲ್ಲ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬರುವ ಹಪಾಹಪಿ ನನಗಿಲ್ಲ ಎಂದರು.
