ರಾಯಪುರ:ಅಂಗಡಿಯಿಂದ ಬಿಸ್ಕತ್ ಹಾಗೂ 200 ರೂಪಾಯಿ ಕದ್ದಿದ್ದಕ್ಕೆ ಏಳು ವರ್ಷದ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ,ಅಮಾನುಷ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಜಸ್ಪುರ್ ಜಿಲ್ಲೆಯ ಕೊಟ್ಬಾ ಬಳಿ ನಡೆದಿದೆ.ಬಿಸ್ಕತ್ ಕೊಳ್ಳಲು ಬಂದ ಬಾಲಕ 200 ರೂಪಾಯಿ ಕದ್ದಿರುವುದಾಗಿ ಅಂಗಡಿ ಮಾಲೀಕ ರಾಮೇಶ್ವರ್ ದಾಡ್ ಸೇನಾ ಹೇಳಿದ್ದಾನೆ.
ಬಾಲಕ ಹಣ ಕಳ್ಳತನ ಮಾಡಿಲ್ಲ ಎಂದು ಹೇಳುತ್ತಿದ್ದರೂ ಅದನ್ನು ಕೇಳದ ಅಂಗಡಿ ಮಾಲೀಕ ಮೊದಲಿಗೆ ಹಲ್ಲೆ ನಡೆಸಿದ್ದಾನೆ.
ನಂತರ ಮರಕ್ಕೆ ಕಟ್ಟಿ ಹಾಕಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿರುವ ವಿಡಿಯೋ
ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಈ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬಾಲಕನ ಪೋಷಕರು, ಅಂಗಡಿ ಮಾಲೀಕನಿಗೆ 200 ರೂ. ವಾಪಾಸ್ ನೀಡಿದ ನಂತರ, ಬಾಲಕನನ್ನು ಬಿಡುಗಡೆ ಮಾಡಲಾಗಿದೆ.
ತಮ್ಮ ಮಗ ಕಳ್ಳತನ ಮಾಡಿಲ್ಲ ಎಂದು ಹೇಳುತ್ತಿದ್ದರೂ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿರುವ ಪೋಷಕರು
ಸ್ಥಳೀಯ ತುಮ್ಲಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುವುದು ಎಂದು ಜಸ್ಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲಜಿ ರಾವ್ ಸೋಮವಾರ್ ತಿಳಿಸಿದ್ದಾರೆ.ಆರೋಪಿಯ ವಿರುದ್ಧ ಸೆಕ್ಷನ್ 342ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
Follow us on Social media