ರಾಯ್ಪುರ : ಮಾವೋವಾದಿಗಳ ಜೊತೆಗೆ ನಡೆದ ಎನ್ ಕೌಂಟರ್ ನಲ್ಲಿ ಇಲ್ಲಿನ ಮದನ್ವಾಡ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹುತಾತ್ಮರಾಗಿದ್ದಾರೆ. ಕಳೆದ ರಾತ್ರಿ ಮನ್ ಪುರ್ ಪೊಲೀಸ್ ಠಾಣೆ ಸರಹದ್ದಿನ ಪರ್ದೊನಿ ಗ್ರಾಮದ ಸಮೀಪ ಎನ್ ಕೌಂಟರ್ ನಡೆದಿದ್ದು ನಾಲ್ವರು ನಕ್ಸಲೀಯರು ಕೂಡ ಹತ್ಯೆಯಾಗಿದ್ದಾರೆ.
ರಾಯ್ಪುರದಿಂದ ಪಶ್ಚಿಮಕ್ಕೆ 170 ಕಿಲೋ ಮೀಟರ್ ದೂರದಲ್ಲಿ ರಾಜನಂದಗಾಂವ್ ಜಿಲ್ಲೆಯ ಮನ್ಪುರದಲ್ಲಿ ಈ ಎನ್ ಕೌಂಟರ್ ನಡೆದಿದೆ. ಈ ಪ್ರದೇಶದಲ್ಲಿ ನಕ್ಸಲರ ಇರುವಿಕೆ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಪೊಲೀಸರ ತಂಡ ಕಳೆದ ರಾತ್ರಿ ಕಾರ್ಯಾಚರಣೆಗೆ ಇಳಿದರು. ಪೊಲೀಸರು ಪ್ರದೇಶವನ್ನು ಸುತ್ತುವರಿದಾಗ ನಕ್ಸಲರು ಪ್ರದೇಶವನ್ನು ಬಿಟ್ಟುಹೋಗಲು ಯತ್ನಿಸಿದರು. ಈ ವೇಳೆ ಎನ್ ಕೌಂಟರ್ ನಡೆಯಿತು.
ನಮ್ಮ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ. ನಾಲ್ಕು ನಕ್ಸಲೀಯರ ಶವಗಳು, 1 ಎಕೆ-47 ರೈಫಲ್, 1 ಎಸ್ ಎಲ್ ಆರ್ ಶಸ್ತ್ರಾಸ್ತ್ರ ಮತ್ತು ಎರಡು ಬೋರ್ ರೈಫಲ್ ಗಳನ್ನು ಎನ್ ಕೌಂಟರ್ ನಡೆದ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ನಂದ್ ಗೌನ್ ಎಸ್ಪಿ ಜಿತೇಂದ್ರ ಶುಕ್ಲ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.
ಹುತಾತ್ಮ ಪೊಲೀಸ್ ಅಧಿಕಾರಿ ಎಸ್ ಕೆ ಶರ್ಮ ಆಗಿದ್ದು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಮೃತ ನಾಲ್ಕು ಮಂದಿ ನಕ್ಸಲೀಯರಲ್ಲಿ ಇಬ್ಬರು ಮಹಿಳೆಯರು. ಮಹಾರಾಷ್ಟ್ರ ಗಡಿಯನ್ನು ಹಂಚಿಕೊಂಡಿರುವ ರಾಜ್ನಂದ್ ಗೌನ್ ಛತ್ತೀಸ್ ಗಢದ ಮಾವೋವಾದಿ ಪೀಡಿತ ಜಿಲ್ಲೆಯಾಗಿದೆ.
Follow us on Social media