ಗಡಿಯಲ್ಲಿ ಕ್ಯಾತೆ ತೆಗೆದು ಭಾರತೀಯ ಯೋಧರು ಹುತಾತ್ಮರಾಗುವಂತೆ ಮಾಡಿದ ಚೀನಾದ ಉತ್ಪನ್ನಗಳನ್ನು ಉತ್ತೇಜಿಸುವುದನ್ನು ಬಿಡುವಂತೆ ಸೆಲಬ್ರಿಟಿಗಳಿಗೆ ವ್ಯಾಪಾರಗಳ ಸಂಸ್ಥೆ ಸಿಎಐಟಿ ಕರೆ ನೀಡಿದೆ.
ಗಲ್ವಾನ್ ಕಣೀವೆಯಲ್ಲಿ ನಡೆದ ಘರ್ಷಣೆಯಲ್ಲಿ ಜೀವ ತೆತ್ತ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಚೀನಾ ಉತ್ಪನ್ನಗಳನ್ನು ಉತ್ತೇಜಿಸುವುದನ್ನು ಬಿಡುವಂತೆ ಅಮೀರ್ ಖಾನ್, ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಸೆಲಬ್ರಿಟಿಗಳಿಗೆ ಸಿಎಐಟಿ ಬಹಿರಂಗ ಪತ್ರದ ಮೂಲಕ ಅಖಿಲ ಭಾರತೀಯ ವ್ಯಾಪಾರಿಗಳು ಕರೆ ನೀಡಿದೆ.
ಇದೇ ವೇಳೆ ಭಾರತೀಯ ಸಾಮಾನ್-ಹಮಾರ ಅಭಿಮಾನ್ ಎಂಬ ರಾಷ್ಟ್ರೀಯ ಚಳುವಳಿಯ ಮೂಲಕ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಕೈ ಜೋಡಿಸುವಂತೆ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ಇನ್ನಿತರ ಸೆಲಬ್ರಿಟಿಗಳಿಗೆ ಸಿಎಐಟಿ ಮನವಿ ಮಾಡಿದೆ.
ಈ ಬಗ್ಗೆ ಸೆಲಬ್ರಿಟಿಗಳಿಗೆ ಪತ್ರ ಬರೆದಿದ್ದು, ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇವಾಲ್, ಚೀನಾದ ಸೇನೆ ಲಡಾಖ್ ಗಡಿಯಲ್ಲಿ ಅತ್ಯಂತ ಹೇಯ ಕೃತ್ಯ ಎಸಗಿದ್ದು, ಪ್ರತಿ ಭಾರತೀಯನ ಹೃದಯದಲ್ಲಿಯೂ ಆಕ್ರೋಶದ ಜ್ವಾಲಾಗ್ನಿ ಉರಿಯುತ್ತಿದೆ. ಕಾನ್ಫೆಡರೇಷನ್ ಡಿಸೆಂಬರ್ 2021 ರ ವೇಳೆಗೆ ಚೀನಾದಿಂದ 13 ಬಿಲಿಯನ್ ಡಾಲರ್ (1 ಲಕ್ಷ ಕೋಟಿ) ನಷ್ಟು ಆಮದಿಗೆ ಕತ್ತರಿ ಹಾಕುವ ಗುರಿ ಹೊಂದಿದೆ. ಭಾರತದಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಪ್ರಮಾಣ ವಾರ್ಷಿಕ 5.25 ಲಕ್ಷ ಕೋಟಿಗಳಷ್ಟಿದೆ. ಆದ್ದರಿಂದ ಚೀನಾ ವಸ್ತುಗಳನ್ನು ಉತ್ತೇಜಿಸುವುದನ್ನು ನಿಲ್ಲಿಸಿ ಎಂದು ಸೆಲಬ್ರಿಟಿಗಳಿಗೆ ಮನವಿ ಮಾಡಲಾಗಿದೆ.
Follow us on Social media