ನವದೆಹಲಿ ; ಮಾರಕ ಕೊರೋನಾ ವೈರಸ್ ತವರು ಚೀನಾಗೆ ಸರಕು ಸಾಗಣಿಕಾ ವಿಮಾನಗಳನ್ನು ಚಲಾಯಿಸಿದ್ದ ಏರ್ ಇಂಡಿಯಾದ ಐದು ಪೈಲಟ್ ಗಳಿಗೆ ಕೋವಿಡ್-19 ವೈರಸ್ ವಕ್ಕರಿಸಿದೆ ಎಂದು ತಿಳಿದುಬಂದಿದೆ.
ಸೋಂಕಿಗೆ ತುತ್ತಾಗಿರುವ ಐದೂ ಪೈಲಟ್ ಗಳು ಮುಂಬೈ ಮೂಲದವರಾಗಿದ್ದು, ಅಚ್ಚರಿ ಎಂದರೆ ಈ ಎಲ್ಲ ಐದೂ ಪೈಲಟ್ ಗಳಲ್ಲಿ ಯಾವುದೇ ರೀತಿಯ ಸೋಂಕಿನ ಲಕ್ಷಣಗಳು ಕಾಣಿಸುತ್ತಿರಲಿಲ್ಲ. ವಿಮಾನಗಳನ್ನು ಹಸ್ತಾಂತರಿಸುವ ಮುನ್ನ ನಡೆಸಲಾಗಿದ್ದ ಪೂರ್ವ ಕೊರೋನಾ ವೈರಸ್ ಸೋಂಕು ಪರೀಕ್ಷೆಯಲ್ಲಿ ಐದು ಪೈಲಟ್ ಗಳಲ್ಲಿ ಸೋಂಕಿರುವುದು ಕಂಡುಬಂದಿದೆ. ಪ್ರಸ್ತುತ ಐದೂ ಪೈಲಟ್ ಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೂಲಗಳ ಪ್ರಕಾರ ಏರ್ ಇಂಡಿಯಾ ಪೈಲಟ್ ಗಳಿಗೆ ಕೆಲಸ ಅಂದರೆ ವಿಮಾನ ಚಾಲನೆ ಕೆಲಸ ನೀಡುವ 72 ಗಂಟೆಗಳ ಮುಂಚಿತವಾಗಿ ಎಲ್ಲ ಪೈಲಟ್ ಗಳು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆಗೆ ಒಳಪಡಬೇಕು. ಹೀಗೆ ಪರೀಕ್ಷೆ ನಡೆಸಿದ್ದ ವೇಳೆ 5 ಪೈಲಟ್ ಗಳಲ್ಲಿ ವೈರಸ್ ಸೋಂಕಿರುವುದು ಬೆಳಕಿಗೆ ಬಂದಿದೆ. ಪ್ರಸ್ತುತ ಪೈಲಟ್ ಗಳ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಪೈಲಟ್ ಗಳ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡಲಾಗುತ್ತಿದೆ.
ಈ ಹಿಂದೆ ಇದೇ ಐದು ಪೈಲಟ್ ಗಳು ಚೀನಾಗೆ ಭಾರತದಿಂದ ಮತ್ತು ಭಾರತಕ್ಕೆ ಚೀನಾದಿಂದ ಸರಕು ಸೇವಾ ವಿಮಾನಗಳನ್ನು ಚಲಾಯಿಸಿದ್ದರು.
Follow us on Social media