ಚಿತ್ರದುರ್ಗ :ಕೋಣಗಳ ಕಳವಿಗೆ ಯತ್ನಿಸಿದ ಅರೋಪ ಹೊರಿಸಿ ಯುವಕನೋರ್ವನನ್ನು ಹಿಗ್ಗಾಮುಗ್ಗಾ ಥಳಿಸಿದ ನಂತರ ಕತ್ತೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ನಡೆಸಿದ ಅಮಾನವೀಯ ಘಟಣೆಯೊಂದು ಚಿತ್ರದುರ್ಗ ಜಿಲ್ಲೆಯಿಂದ ವರದಿಯಾಗಿದೆ. ಘಟನೆಯ ಕುರಿತು ಹಿರಿಯೂರು ತಾಲೂಕಿನ ಪೋಲಿಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು ಪೋಲಿಸರು ಕೆಲ ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿರಿಯೂರು ತಾಲೂಕಿನ ಸರಸ್ವತಿ ಗೇಟ್ ಹತ್ತಿರದ ಸೂರಪ್ಪನ ಹಟ್ಟಿ ಎಂಬಲ್ಲಿ ಕೋಣವೊಂದರ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಈಶ್ವರ್ ಎಂಬ ಯುವಕ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದನು. ಗೋ ಕಳ್ಳತನದಲ್ಲಿ ಈ ಹಿಂದೆಯೂ ಭಾಗಿಯಾಗಿದ್ದ ಆರೋಪವಿದ್ದ ಈಶ್ವರನನ್ನು ಸ್ಥಳೀಯರು ಕಂಬವೊಂದಕ್ಕೆ ಕಟ್ಟಿಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ನಂತರ ಆತನನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ್ದರ ಚಿತ್ರ ಹಾಗೂ ವೀಡಿಯೋ ತುಣುಕುಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದುವು.
ಮಾದ್ಯಮ ವರದಿಗಳ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಅಮಾನವೀಯ ಘಟನೆಯ ಕುರಿತು ತನಿಖೆಗೆ ಅದೇಶಿಸಿದೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಜಿಲ್ಲಾಧಿಕಾರಿ ಕವಿತಾ ಎಸ್ ಮಣಿಕೇರಿ ಇವರು ತಪ್ಪಿತಸ್ಥರನ್ನು ಶೀಘ್ರ ಬಂಧಿಸಲು ಪೋಲಿಸರಿಗೆ ಆದೇಶ ನೀಡಿದ್ದಾರೆ. ಇದೀಗ ಪೋಲಿಸರು ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಗುಂಡಜ್ಜರ ಮೇನಪ್ಪ, ಕರಿಯಪ್ಪ, ಕಿಟ್ಟಪ್ಪ, ರಾಮಣ್ಣ, ಜಯಪ್ಪ, ಮಂಜಪ್ಪ, ಬಾಳಪ್ಪ, ಹಾಗೂ ಇತರರ ವಿರುದ್ಧ ಅಪರಾಧ ಕಾಯ್ದೆ ಪ್ರಕಾರ 143, 147, 323, 355, 504, 506, ಹಾಗೂ 149 ಸೆಕ್ಷಣ್ ಗಳಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
Follow us on Social media