ಬೆಳ್ತಂಗಡಿ: ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟಿ ಅರಣ್ಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದ್ದು, ಚಾರ್ಮಾಡಿ- ಕೊಟ್ಟಿಗೆಹಾರ ಮಧ್ಯೆ ಹಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು, ೪ ಕಡೆಗಳಲ್ಲಿ ಬೃಹತ್ ಮರಗಳು ಧರೆಗುರುಳಿವೆ.
ಪಶ್ವಿಮ ಘಟ್ಟದ ಗುಡ್ಡಗಾಡು ಪ್ರದೇಶಗಳಲ್ಲಿ ಚಾರ್ಮಾಡಿ ಘಾಟಿ ಅರಣ್ಯ ವ್ಯಾಪ್ತಿ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆ ಒಳಗೊಂಡಿದೆ. ಚಾರ್ಮಾಡಿ ಘಾಟಿ ೫ನೇ ತಿರುವು ಹಾಗೂ ೧೦ನೇ ತಿರುವು ಮಧ್ಯೆ ೩ ಕಡೆಗಳಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿದಿದ್ದು, ೨ ಕಡೆ ಬೃಹತ್ ಮರಗಳು ಧರೆಗುರುಳಿವೆ. ಎರಡು ದಿನಗಳಿಂದ ನಿರಂತರ ಮಳೆಯಾದ ಪರಿಣಾಮ ಘಾಟಿ ಮಣ್ಣು ಸಡಿಲಗೊಂಡಿದ್ದು, ೨ ಕಡೆ ಹೆದ್ದಾರಿ ಸಮೀಪದ ತಡೆಗೋಡೆ ಕುಸಿದಿದೆ.
ರಸ್ತೆಗುರುಳಿದ ಬಂಡೆ: ಚಾರ್ಮಾಡಿ ಘಾಟಿಯ ಮೂಡಿಗೆರೆ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಆಲಟ್ಟಿ ಪ್ರದೇಶದಲ್ಲಿ ಬೃಹತ್ ೩ ಬಂಡೆಗಳು ರಸ್ತೆಗುರುಳಿದ್ದು, ಮೂಡಿಗೆರೆ ಪೊಲೀಸರ ಸಹಕಾರದಲ್ಲಿ ತೆರವು ಕಾರ್ಯ ನಡೆದಿದೆ. ಏರಿಕಲ್ಲು, ಬಾಳೆಗುಡ್ಡ, ಹೊಸಮನೆಗುಡ್ಡ, ಮಿಂಚುಕಲ್ಲು, ಬಾರಿಮಲೆ, ಬಾಂಜಾರುಮಲೆ, ಅಣಿಯೂರು ಕಣಿವೆ, ಸೋಮನಕಾಡು, ಜೇನುಕಲ್ಲು, ಕೊಡೆಕಲ್ಲು, ಮೃತ್ಯುಂಜಯ ಕಣಿವೆ ಪ್ರದೇಶಗಳಲ್ಲಿ ಕಳೆದ ೪೦ ಗಂಟೆಗಳಿಂದ ನಿರಂತ ಮಳೆ ಸುರಿಯುತ್ತಿದ್ದು, ಘಾಟಿ ವ್ಯಾಪ್ತಿಯಲ್ಲಿ ಜಲಪಾತದಂತೆ ನೀರು ಹರಿಯುತ್ತಿದೆ. ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶ ಚಾರ್ಮಾಡಿ ಘಾಟಿ ಅರಣ್ಯ ವ್ಯಾಪ್ತಿಯಲ್ಲಿ ಮಳೆಗಾಲ ಸಂದರ್ಭ ಪ್ರತಿದಿನ ೧೫೦ ಮಿಲಿ ಮೀಟರ್ ಮಳೆಯಾಗುತ್ತದೆ. ಈ ಬಾರಿ ೧೫ ಮಿ.ಮೀ. ಬೇಸಗೆಯಲ್ಲೇ ಮಳೆಯಾಗಿದೆ. ಜೂನ್ ೧ರಿಂದ ಜುಲೈ ೧೫ರ ವರೆಗೆ ೪೬ ಮಿ.ಮೀ. ಸರಾಸರಿ ಮಳೆಯಾಗಿದೆ.