ಬೆಂಗಳೂರು : ರಾಜ್ಯದ ಗಡಿಭಾಗದ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾಗಿ ಚಿತ್ರನಟ ಪುನೀತ್ ರಾಜ್‍ಕುಮಾರ್ ಕಾರ್ಯನಿರ್ವಹಿಸಲಿದ್ದಾರೆ.
ಮೂಲತಃ ಚಾಮರಾಜನಗರ ಜಿಲ್ಲೆಯವರೇ ಆದ ಪುನೀತ್‍ರಾಜ್‍ಕುಮಾರ್ ಅವರನ್ನು ಶನಿವಾರ ಸಂಜೆ ಸದಾಶಿವನಗರದ ಅವರ ಮನೆಯಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭೇಟಿಯಾಗಿ ಚಾಮರಾಜನರ ಜಿಲ್ಲಾಡಳಿತದ ಪರವಾಗಿ ಪುನೀತ್ ರಾಜ್‍ಕುಮಾರ್ ಅವರನ್ನು ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಅಧಿಕೃತವಾಗಿ ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಚಾಮರಾಜನಗರ ಜಿಲ್ಲೆ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆ ಹೊಂದಿರುವ ಚಾಮರಾಜನಗರ ಜಿಲ್ಲೆ ಜೀವಂತ ಸಂಸ್ಕೃತಿಗೆ ಹೆಸರಾಗಿದೆ. ಸಿದ್ಧ ಪುರುಷರ ನಾಡು ಹಾಗೂ ಜಾನಪದ ಕಲೆಗಳ ತವರೂರು ಎಂದೇ ಖ್ಯಾತಿ ಪಡೆದಿದೆ. ಪ್ರಸ್ತುತ ಜಿಲ್ಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಚಿಂತನೆಯನ್ನು ಜಿಲ್ಲಾಡಳಿತ ಮಾಡಿದೆ. ಇದು ಆರಂಭದ ಹೆಜ್ಜೆ. ಚಾಮರಾಜನಗರ ಜಿಲ್ಲೆ ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡುವಂತೆ ಸಮಗ್ರ ಅಭಿವೃದ್ದಿಯೊಂದಿಗೆ ಜಿಲ್ಲೆಯನ್ನು ಚಂದಗಾಣಿಸುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಪುನೀತ್‍ರಾಜ್‍ಕುಮಾರ್ ಅವರು ಅಭಿವೃದ್ಧಿ ರಾಯಭಾರಿಯಾಗಿ ಸೇವೆ ಸಲ್ಲಿಸುವುದರಿಂದ ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ಇತರೆ ಕ್ಷೇತ್ರಗಳ ಪ್ರಗತಿಯಾಗಿ ಜಿಲ್ಲೆಯ ಅಭಿವೃದ್ಧಿಯ ವೇಗ ಇನ್ನೂ ಹೆಚ್ಚಾಗಲಿದೆ ಎಂದರು.