ಚಂಡೀಗಡ: ಚಂಡೀಗಡದ ವಿವಿಯ ಹಾಸ್ಟೆಲ್ನಲ್ಲಿ 60 ಯುವತಿಯರು ಸ್ನಾನ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆದ ಘಟನೆ ಬೆಳಕಿಗೆ ಬಂದಿದೆ. ಇದನ್ನು ವಿದ್ಯಾರ್ಥಿನಿಯೊಬ್ಬಳೇ ಚಿತ್ರೀಕರಿಸಿ ಸೋರಿಕೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ವಿದ್ಯಾರ್ಥಿನಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ.ವಿದ್ಯಾರ್ಥಿನಿಯರು ಸ್ನಾನ ಮಾಡುವ ವಿಡಿಯೋ ಮಾಡಿದ ಯುವತಿ ಅದನ್ನು ಇನ್ನೋರ್ವ ಯುವಕನಿಗೆ ವಿಡಿಯೋವನ್ನು ಕಳಿಸಿಕೊಟ್ಟಿದ್ದಾಳೆ. ಆ ಯುವಕ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ವೈರಲ್ ಮಾಡಿದ್ದಾನೆ. ಹಾಸ್ಟೆಲ್ ವಿಡಿಯೋ ಲೀಕ್ ಬೆನ್ನಲ್ಲೇ ವಿವಿ ಕ್ಯಾಂಪಸ್‌ನಲ್ಲಿ ಮಧ್ಯರಾತ್ರಿ ಬೃಹತ್ ಪ್ರತಿಭಟನೆ ನಡೆದಿದೆ.
ಪೊಲೀಸರ ಸ್ಪಷ್ಟನೆ
ವಿದ್ಯಾರ್ಥಿನಿಯೊಬ್ಬಳು ತನ್ನ ಖಾಸಗಿ ವಿಡಿಯೊಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ್ದಳು. ಈ ವಿಡಿಯೊ ಒಂದು ಮಾತ್ರ ಸೋರಿಕೆ ಆಗಿದೆ. ಆದರೆ, 60 ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಡಿಯೊಗಳು ಪತ್ತೆಯಾಗಿಲ್ಲ. ವಿದ್ಯಾರ್ಥಿನಿಯರು ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದು ಮೋಹಾಲಿ ಎಸ್‌ಪಿ ವಿವೇಕ್ ಸೋನಿ ತಿಳಿಸಿದ್ದಾರೆ.
‘ಬಂಧಿತ ಯುವತಿ ತನ್ನ ಪ್ರಿಯಕರನಿಗೆ ಕಳಿಸಲು ಬಾತ್‌ರೂಮ್‌ನಲ್ಲಿ ತನ್ನ ಖಾಸಗಿ ವಿಡಿಯೊವನ್ನು ಶೂಟ್ ಮಾಡುವಾಗ ಅದನ್ನು ಇತರ ಕೆಲ ವಿದ್ಯಾರ್ಥಿನಿಯರು ನೋಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಕೆ ಉಳಿದವರ ಸ್ನಾನದ ವೀಡಿಯೋ ಮಾಡಿ ದ್ವೇಷದಿಂದ ಪ್ರಿಯಕರನ ಜೊತೆ ಸೇರಿಕೊಂಡು ವೈರಲ್ ಮಾಡಿರಬಹುದು’ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಯುವತಿಯ ವಿಚಾರಣೆ
ಇನ್ನು ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆದೇಶಿಸಿದ್ದಾರೆ.
‘ಚಂಡೀಗಡ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಕೇಳಿ ಬೇಸರವಾಗಿದೆ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ವದಂತಿಗಳಿಗೆ ಕಿವಿ ಕೊಡದಂತೆ ಎಲ್ಲರಿಗೂ ಮನವಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.ಸ್ಥಳೀಯ ವರದಿಗಳ ಪ್ರಕಾರ, ಆನ್‌ಲೈನ್‌ನಲ್ಲಿ ವಿಡಿಯೋ ಸೋರಿಕೆಯಾದ ನಂತರ ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ. ಆರೋಪಿ ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿನಿ ಎಂದು ಪೊಲೀಸರು ತಿಳಿಸಿದ್ದಾರೆ.
Follow us on Social media