ಮೊರ್ಬಿ(ಗುಜರಾತ್): ಗುಜರಾತ್ನ ಮೊರ್ಬಿಯ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದ್ದು, ಈ ವರೆಗೂ 177ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೇನೆ, ನೌಕಾಪಡೆ, ವಾಯುಪಡೆ, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗುಜರಾತಿನ ಮೊರ್ಬಿಯಲ್ಲಿ ನಡೆದ ತೂಗು ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಈ ದುರಂತದಲ್ಲಿ ಬಿಜೆಪಿ ಸಂಸದರೊಬ್ಬರ ಕುಟುಂಬದ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
- ರಾಜಕೋಟ್ ಬಿಜೆಪಿ ಸಂಸದ ಮೋಹನ್ ಭಾಯ್ ಕಲ್ಯಾಣ್ ಜಿ ಕುಂದರಿಯಾ ಅವರ ಸಹೋದರಿ ಕುಟುಂಬದ 12 ಮಂದಿ ಮೃತಪಟ್ಟಿದ್ದು, ಈ ಪೈಕಿ ಐವರು ಮಕ್ಕಳು ಎಂದು ಹೇಳಲಾಗಿದೆ.ತೂಗು ಸೇತುವೆ ದುರಂತದಲ್ಲಿ ಈವರೆಗೆ 141 ಮಂದಿ ಸಾವನ್ನಪ್ಪಿದ್ದು, ಇನ್ನೂ ಸಾಕಷ್ಟು ಮಂದಿ ನಾಪತ್ತೆಯಾಗಿರುವ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಇದೆ.ಇನ್ನು ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಮೃತ ದೇಹಗಳು ಪತ್ತೆಯಾಗುತ್ತಲೇ ಇವೆ.ದುರಂತ ಕುರಿತು ಗುಜರಾತ್ ರಾಜ್ಯದ ಗೃಹ ಸಚಿವ ಹರ್ಷ್ ಸಂಘ್ವಿ ಅವರು ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಐಜಿಪಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ ನೌಕಾಪಡೆ, ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ), ವಾಯುಪಡೆ ಮತ್ತು ಭೂಸೇನೆ ತ್ವರಿತವಾಗಿ ಸ್ಥಳಕ್ಕೆ ಆಗಿಮಿಸಿ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ಹೇಳಿದ್ದಾರೆ.