ಹುಬ್ಬಳ್ಳಿ: ಹಳೆ ಹಬ್ಬಳ್ಳಿಯ ದೇವರ ಗುಡಿಹಾಳ ರಸ್ತೆಯ ಅಲ್ ತಾಜ್ ರೆಸ್ಟೋರೆಂಟ್ ಮುಂಭಾಗದಲ್ಲಿ ಅಪರಿಚಿತರಿಂದ ಗುಂಡಿನ ದಾಳಿಗೊಳಗಾಗಿದ್ದ ರೌಡಿಶೀಟರ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಮೃತನನ್ನು ರೌಡಿಶೀಟರ್ ಫ್ರೂಟ್ ಇರ್ಫಾನ್ ಎಂದು ಪೊಲೀಸರು ಗುರುತಿಸಿದ್ದಾರೆ. ಮಗನ ಮದುವೆ ಸಮಾರಂಭ ನಡೆಯುತ್ತಿದ್ದ ಹಾಲ್ ಮುಂಭಾಗದ ರಸ್ತೆಯಲ್ಲಿಯೇ ಗುರುವಾರ ಸಂಜೆ ಈ ಘಟನೆ ನಡೆದಿತ್ತು. ಮೊಬೈಲ್ ಫೋನ್ ಸಂಭಾಷಣೆಯಲ್ಲಿ ನಿರತನಾಗಿದ್ದ ಇರ್ಫಾನ್ ಮೇಲೆ ಮೂರು ಬೈಕ್ ಗಳಲ್ಲಿ ಆಗಮಿಸಿದ್ದ 6 ಮಂದಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಕೂಡಲೇ ಪರಾರಿಯಾಗಿದ್ದರು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಫ್ರೂಟ್ ಇರ್ಫಾನ್ ನನ್ನು ಕೂಡಲೇ ಸಂಬಂಧಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಳೆ ಹುಬ್ಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Follow us on Social media