ಪುಣೆ: ಮಾರಕ ಕೊರೋನಾ ವೈರಸ್ ಹಿರಿಯರು, ಚಿಕ್ಕಮಕ್ಕಳು ಮಾತ್ರವಲ್ಲ ಇದೀಗ ಇನ್ನೂ ಗರ್ಭದಲ್ಲಿರುವ ಮಕ್ಕಳಿಗೂ ಒಕ್ಕರಿಸಿದ್ದು, ಪುಣೆಯಲ್ಲಿ ಇಂತಹ ಮೊದಲ ಪ್ರಕರಣ ವರದಿಯಾಗಿದೆ.
ಮಹಾರಾಷ್ಟ್ಕದ ಪುಣೆಯ ಸ್ಯಾಷನ್ ಜನರಲ್ ಆಸ್ಪತ್ರೆಯಲ್ಲಿ ಇಂತಹ ಪ್ರಕರಣ ದಾಖಲಾಗಿದ್ದು, ಗರ್ಭಿಣಿ ಮಹಿಳೆಯಲ್ಲಿದ್ದ ಕೊರೋನಾ ವೈರಸ್ ಹೊಕ್ಕುಳಬಳ್ಳಿ (placenta) ಮೂಲಕ ಗರ್ಭದಲ್ಲಿರುವ ಮಗುವಿಗೂ ಒಕ್ಕರಿಸಿದೆ. ಇಂತಹ ಪ್ರಕರಣ ದೇಶದಲ್ಲೇ ಮೊದಲ ಪ್ರಕರಣವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ವೈಜ್ಞಾನಿಕ ಭಾಷೆಯಲ್ಲಿ ಇದನ್ನು ಲಂಬ ಪ್ರಸರಣ (Vertical transmission) ಎನ್ನಲಾಗುತ್ತದೆ. ಕೊರೋನಾ ಸೋಂಕು ಪೀಡಿತ ತಾಯಿಯ ಗರ್ಭಾಶಯದಲ್ಲಿರುವ ಮಗುವಿಗೆ ಹೊಕ್ಕುಳಬಳ್ಳಿ (placenta) ಮೂಲಕ ವೈರಸ್ ಪ್ರಸರಣವಾಗಿದೆ. ಸಾಮಾನ್ಯವಾಗಿ ಗರ್ಭದಲ್ಲಿರುವ ಮಗುವಿಗೆ ಹೊಕ್ಕುಳಬಳ್ಳಿ ಆಮ್ಲಜನಕ ಮತ್ತು ಅಗತ್ಯ ಪೌಷ್ಠಿಕಾಂಶಗಳನ್ನು ನೀಡುತ್ತದೆ. ಇದು ಇದೇ ಮೊದಲು ಎಂಬಂತೆ ಹೊಕ್ಕುಳಬಳ್ಳಿ ಮೂಲಕ ಮಗುವಿಗೆ ವೈರಸ್ ಪ್ರಸರಣ ಕೂಡ ಆಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ವೈದ್ಯೆ ಡಾ.ಆರ್ತಿ ಕಿನಿಕಾರ್ ಅವರು, ‘ತಾಯಿ ಸೋಂಕಿಗೆ ತುತ್ತಾಗಿದ್ದರೆ, ಆ ಸೋಂಕು ಹೊಕ್ಕುಳಬಳ್ಳಿ ಮೂಲಕ ಮಗುವಿಗೆ ಸೋಂಕುತ್ತದೆ. ಸಾಮಾನ್ಯವಾಗಿ ಹೊಕ್ಕುಳಬಳ್ಳಿ ತಾಯಿಯಿಂದ ಪೌಷ್ಠಿಕಾಂಶಳನ್ನು ಮತ್ತು ಆಮ್ಲಜನಕವನ್ನು ಮಗುವಿಗೆ ಒದಗಿಸುತ್ತದೆ. ಆ ಮೂಲಕ ಮಗುವಿನ ಬೆಳವಣಿಗೆಗೆ ನೆರವಾಗುತ್ತದೆ. ಆದರೆ ಇದೇ ಹೊಕ್ಕುಳಬಳ್ಳಿಯಿಂದ ಸೋಂಕು ಕೂಡ ಹರಡುತ್ತದೆ ಎಂಬುದಕ್ಕೆ ಈ ಪ್ರಕರಣ ಮತ್ತೊಂದು ನಿದರ್ಶನ ಎಂದು ಹೇಳಿದರು.
ಈ ಹಿಂದೆ ಹಲವು ಪ್ರಕರಣಗಳಲ್ಲಿ ಮಕ್ಕಳಿಗೆ ತಾಯಿ ಮೂಲಕ ಸೋಂಕು ತಗುಲಿದೆ. ಮಗುವಿನ ಆರೈಕೆ ಮಾಡುವಾಗ ದೈಹಿಕ ಸ್ಪರ್ಶವಾಗಿ ಅಥವಾ ಎದೆಹಾಲುಣಿಸುವಾಗ ಸೋಂಕು ಪ್ರಸರಣವಾಗಿ ಸೋಂಕು ತಗಲುತ್ತದೆ. ಹೀಗಾಗಿ ನವಜಾತ ಶಿಶುಗಳಿಗೆ ಸೋಂಕು ಅಸಾಧ್ಯ ಎಂದು ಹೇಳಲಾಗಿತ್ತು. ಆದರೆ ಇದೆೇ ಮೊದಲ ಬಾರಿಗೆ ಹೊಕ್ಕುಳಬಳ್ಳಿ ಮೂಲಕ ಸೋಂಕು ಪ್ರಸರಣವಾಗಿದೆ. ಇದು ವೈದ್ಯರ ನಂಬಿಕೆಯನ್ನೇ ಬುಡಮೇಲು ಮಾಡಿದೆ. ತಾಯಿಗೆ ರೋಗ ಲಕ್ಷಣಗಳಿದ್ದವೇ ಇಲ್ಲವೇ ಎಂಬುದು ಇಲ್ಲಿ ಗಣನೆಗೆ ಬರುವುದಿಲ್ಲ. ಆಕೆಗೆ ಸೋಂಕು ಇತ್ತೇ ಅಥವಾ ಇಲ್ಲವೇ ಎಂಬುದಷ್ಟೇ ಪ್ರಮುಖವಾಗುತ್ತದೆ ಎಂದು ಹೇಳಿದ್ದಾರೆ.
ಮಹಿಳೆ ಆಸ್ಪತ್ರೆಯಲ್ಲಿದ್ದಾಗ ಪರೀಕ್ಷೆಗೊಳಪಡಿಸಲಾಗಿತ್ತು. ಆಕೆಯಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳಿರಲಿಲ್ಲ. ಆಕೆಯ ವರದಿ ಕೂಡ ಕೋವಿಡ್ ನೆಗೆಟಿವ್ ಬಂದಿತ್ತು. ಆದರೆ ಮಗು ಜನಿಸಿದ ಬಳಿಕ ಮಗುವನ್ನು ಕೋವಿಡ್ ಪರೀಕ್ಷೆ ಒಳಪಡಿಸಲಾಗಿತ್ತು. ಆದರೆ ಮಗುವಿನ ವರದಿ ಪಾಸಿಟಿವ್ ಬಂದಿದೆ. ಮಗುವಿನ ಮೂಗು, ಬಾಯಿಯ ಸ್ವಾಬ್ ಪರೀಕ್ಷೆ ಮತ್ತು ಹೊಕ್ಕುಳಬಳ್ಳಿ, ಕರುಳುಬಳ್ಳಿಯ ಪರೀಕ್ಷೆಗಳು ಪಾಸಿಟಿವ್ ಬಂದಿದೆ. ಪ್ರಸ್ತುತಮಗುವನ್ನು ಪ್ರತ್ಯೇಕವಾಗಿರಿಸಲಾಗಿತ್ತು, ಮಗುವಿನಲ್ಲಿ ಕೊರೋನಾದ ಗಂಭೀರ ಲಕ್ಷಣಗಳಿವೆ. ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ, ಉರಿಯೂತದಂತಹ ಲಕ್ಷಣಗಳಿದ್ದವು, ಬಳಿಕ ಮಗುವಿನ ಚಿಕಿತ್ಸೆ ಯಶಸ್ವಿಯಾಗಿತ್ತು. ಮಗು ಚೇತರಿಕೆಯಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಡಾ.ಆರ್ತಿ ಕಿನಿಕಾರ್ ಹೇಳಿದ್ದಾರೆ.
ಬಳಿಕ ನಡೆದ ಕೂಲಂಕುಷ ತನಿಖೆಯಲ್ಲಿ ಮಗುವಿಗೆ ಯಾವ ಮೂಲದಿಂದ ವೈರಸ್ ಸೋಂಕು ತಗುಲಿರಬಹುದು ಎಂಬ ಅಂಶ ಬೆಳಕಿಗೆ ಬಂದಿದ್ದು, ಮೂರು ವಾರಗಳ ಸತತ ತನಿಖೆಯಿಂದ ತಿಳಿದಿದ್ದೇನು ಎಂದರೆ ಹೊಕ್ಕುಳಬಳ್ಳಿಯಿಂದಲೇ ಸೋಂಕು ಪ್ರಸರಣವಾಗಿದೆ ಎಂಬುದನ್ನು ಮನಗಂಡಿದ್ದೇವೆ. ಅಂತೆಯೇ ಮಗು ಮತ್ತು ತಾಯಿಯಯನ್ನು ಆ್ಯಂಟಿ ಬಾಡಿ ಪರೀಕ್ಷೆಗೊಳಪಡಿಸಲಾಗಿದ್ದು, ಇಬ್ಬರಲ್ಲೂ ಆ್ಯಂಟಿ ಬಾಡಿ ಕಣಗಳು ಬೆಳೆದಿದ್ದವು. ಈ ಪ್ರಕರಣ ನಿಜಕ್ಕೂ ನಮಗೆ ದೊಡ್ಡ ಸವಾಲಾಗಿತ್ತು. ಇಡೀ ಪ್ರಕರಣದ ದಾಖಲೆಗಳನ್ನು ಮತ್ತು ತನಿಖಾ ವರದಿಗಳನ್ನು ಐಸಿಎಂಆರ್ ಗೆ ನೀಡಿದ್ದೇವೆ. ಈ ಸವಾಲಿನ ಪ್ರಕರಣವನ್ನು ಯಶಸ್ವಿಯಾಗಿ ನಿಭಾಯಿಸಲು ಸಹಕರಿಸಿದ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.
Follow us on Social media