ಬೆಂಗಳೂರು: ವಿವಿಧ ಖಾಸಗಿ ಸಂಸ್ಥೆಗಳು, ಸೊಸೈಟಿಗಳು, ಸಂಘ, ಸಂಸ್ಥೆಗಳಿಗೆ ಸರ್ಕಾರ ನೀಡಿರುವ ಜಮೀನು, ಜಾಗದ ಗುತ್ತಿಗೆಯನ್ನು ಶಾಶ್ವತವಾಗಿ ಅದೇ ಸಂಸ್ಥೆಗಳಿಗೆ ಬಿಟ್ಟು ಕೊಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸಂಪುಟ ಸಭೆ ಕೈಗೊಂಡಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧಸ್ವಾಮಿ, ಅದೇ ಸಂಸ್ಥೆಗೆ ಭೂಮಿ ಬಿಟ್ಟುಕೊಡುವ ಪ್ರಸ್ತಾವನೆಗೆ ಅನುಮತಿ ನೀಡಲಾಗಿದೆ. ಭೂಮಿಯನ್ನು ನೀಡಿರುವ ಉದ್ದೇಶಕ್ಕಾಗಿ ಮಾತ್ರ ಬಳಸಿರಬೇಕು. ಒಂದು ವೇಳೆ ಭೂಮಿಯನ್ನು ಬಳಕೆ ಮಾಡಿಲ್ಲದಿದ್ದರೆ ಅದನ್ನು ವಾಪಸು ಪಡೆಯಬಹುದು ಎಂದರು.
ಕೋವಿಡ್ 19 ಸೋಂಕಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಿದ್ದು, ಇದಕ್ಕಾಗಿ ಚಿಕಿತ್ಸಾ ದರ ನಿಗದಿ ಮಾಡಲಾಗಿದೆ. ಇದಕ್ಕೆ ಸಂಪುಟ ಸಭೆ ಅನುಮತಿ ನೀಡಿದ್ದು, ಖಾಸಗಿ ಆಸ್ಪತ್ರೆಗಳ ದರಗಳ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಇಂದು ಅವರ ಜೊತೆ ಸಭೆ ನಡೆಸಲಿದ್ದು, ದರದಲ್ಲಿ ಪರಿಷ್ಕರಣೆಯಾಗುವ ಸಾಧ್ಯತೆ ಇದೆ ಎಂದು ಮಾಧುಸ್ವಾಮಿ ತಿಳಿಸಿದರು.
ಸಂಪುಟ ಸಭೆಯ ಪ್ರಮುಖ ತೀರ್ಮಾನ
– 2021 ನೇ ಸಾಲಿನ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗೆ ಹೆಸರುಗಳನ್ನು ಶಿಫಾರಸ್ಸು ಮಾಡಲು ಸಂಪುಟ ಉಪ ಸಮಿತಿ ರಚನೆ
– ಕರ್ನಾಟಕ ಶಾಸಕರು, ಜನಪ್ರತಿನಿಧಿಗಳ ವೇತನ ,ಪಿಂಚಣಿ, ಭತ್ಯೆ ಇತರೆ (ತಿದ್ದುಪಡಿ) 2020ರ ವಿಧೇಯಕಕ್ಕೆ ಅನುಮೋದನೆ. ಸಚಿವ, ಶಾಸಕರ ವೇತನದಲ್ಲಿ ಶೇ.30 ಕಡಿತಕ್ಕೆ ಅಸ್ತು.
-ವಿವಿಧ ಯೋಜನೆಗಳಲ್ಲಿನ ವಿವಿಧ ಹಂತದಲ್ಲಿರುವ 9.74 ಲಕ್ಷ ವಸತಿ ಕಾಮಗಾರಿಗಳಿಗೆ 10,194.4 ಕೋಟಿ ರೂ ಬಿಡುಗಡೆ ಮಾಡಲು ಅನುಮೋದನೆ
– ಜೀವ ರಕ್ಷಕ ಸಾಧನಗಳನ್ನು ಒಳಗೊಂಡ 120 ಆ್ಯಂಬುಲೆನ್ಸ್ ಗಳನ್ನು 32.04 ಕೋಟಿ ರೂ ವೆಚ್ಚದಲ್ಲಿ ಖರೀದಿಗೆ ಅನುಮೋದನೆ.
– ತಿರುಪತಿ ತಿರುಮಲದಲ್ಲಿ ಕರ್ನಾಟಕ ಹೊಂದಿರುವ 7.5 ಎಕರೆ ಭೂಮಿಯಲ್ಲಿ 200 ಕೋಟಿ ರೂ. ಮೊತ್ತದಲ್ಲಿ ಕಲ್ಯಾಣ ಮಂಟಪ, ಯಾತ್ರಿ ನಿವಾಸ, ಕಲ್ಯಾಣಿ, ಇತರೆ ಸೌಲಭ್ಯ ಕಲ್ಪಿಸುವ ಯೋಜನೆಗೆ ಅನುಮೋದನೆ. ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಯೋಜನೆ ಕಾರ್ಯಗತಗೊಳಿಸಲು ಸೂಚಿಸಲಾಗಿದೆ.
– 406.41 ಕೋಟಿ ರೂ ರೈಲ್ವೆ ಲೈನ್ ಡಬ್ಲಿಂಗ್ ಕಾಮಗಾರಿಗೆ ಅನುಮೋದನೆ. ಬೈಯಪ್ಪನಹಳ್ಳಿ- ಹೊಸೂರು -48 ಕಿ.ಮೀ,ಯಶವಂತಪುರ-ಚನ್ನಸಂದ್ರ 21.70 ಕಿ.ಮೀಗೆ ಕಾಮಗಾರಿಗೆ ಅಸ್ತು.
– ಪಿಪಿಪಿ ಮಾದರಿಯಲ್ಲಿ ಉಪನಗರ ರೈಲು ಯೋಜನೆ ಅನುದಾನ ಕಡಿತಗೊಳಿಸಿ 15,767 ಕೋಟಿ ರೂ ಪರಿಷ್ಕೃತ ಪ್ರಸ್ತಾವನೆಗೆ ತಾತ್ವಿಕ ಅನುಮೋದನೆ.
-ಕಾವೇರಿ ನೀರಾವರಿ ನಿಗಮಕ್ಕೆ ಶೇ 40% ಬಂಡವಾಳ ಮತ್ತು ರಾಜಸ್ವ ವೆಚ್ಚ ನೀಡಲು ಅನುಮೋದನೆ
– ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು 40 ವರ್ಷ ಅವಧಿಗೆ ನಿರಾಣಿ ಶುಗರ್ಸ್ ಸಂಸ್ಥೆಗೆ 400 ಕೋಟಿ ರೂ.ಗೆ ಗುತ್ತಿಗೆ ನೀಡಲು ಅನುನೋದನೆ
-ಕೋವಿಡ್ ಅವಧಿ ಮುಗಿಯುವ ವರೆಗೆ ಬೆಂಗಳೂರಿನಲ್ಲಿರುವ ಎಲ್ಲಾ 35 ಪಿಎಚ್ ಸಿ, 14 ಎಚ್ ಸಿಎಚ್ ಗಳನ್ನು ಬಿಬಿಎಂಪಿ ವ್ಯಾಪ್ತಿಗೆ ನೀಡಲು ನಿರ್ಧಾರ.