ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆಗಳ ಮೀಸಲು ವಿಚಾರದಲ್ಲಿ ಸರ್ಕಾರ ಹಾಗೂ ಖಾಸಗಿ ಆಡಳಿತ ಮಂಡಳಿಗಳ ನಡುವಣ ಇನ್ನೂ ಒಮ್ಮತ ಮೂಡಿದಂತೆ ಕಾಣುತ್ತಿಲ್ಲ.
ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲು ಇಡದ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಲೈಸೆನ್ಸ್ ರದ್ದುಪಡಿಸುವಂತೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಕೋವಿಡ್ 19 ಚಿಕಿತ್ಸೆ ಸಾಮರ್ಥ್ಯ ಹಾಗೂ ಸೌಲಭ್ಯ ಹೊಂದಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ. 50 ಹಾಸಿಗೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರ್ ಆಗಿ ಬರುವ ಸೋಂಕಿತರಿಗೆ ಮೀಸಲಿಡಬೇಕೆಂದು ಸರ್ಕಾರ ಅದೇಶ ಹೊರಡಿಸಿದೆ. ಕೆಪಿಎಂಇ ಕಾಯ್ದೆಯಡಿ ನೋಂದಣಿಯಾದ ಆಸ್ಪತ್ರೆಗಳು, ಕೋವಿಡ್ 19 ವಾರ್ಡ್ ಆರಂಭಿಸುವುದು ಕಡ್ಡಾಯವಾಗಿದೆ. ಆದರೆ,ಈ ಆದೇಶಕ್ಕೆ ಖಾಸಗಿ ಆಸ್ಪತ್ರೆಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
ಇದರಿಂದ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳ ವಿರುದ್ಧ ಅಸಮಾಧಾನಗೊಂಡಿರುವ ಡಾ. ಅಶ್ವತ್ ನಾರಾಯಣ್, ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಶೇ.50 ರಷ್ಟು ಹಾಸಿಗೆ ಮೀಸಲು ಇಡದ ಇಂತಹ ಆಸ್ಪತ್ರೆಗಳ ಲೈಸೆನ್ಸ್ ವಜಾಗೊಳಿಸುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
Follow us on Social media