Breaking News

ಕೌಶಲ್ಯ, ಮರುಕೌಶಲ್ಯ ಮತ್ತು ಉನ್ನತ ಕೌಶಲ್ಯ ಪ್ರಸ್ತುತತೆಯ ಮೂಲಮಂತ್ರ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೋವಿಡ್-19ನ ಈ ಸಂಕಷ್ಟದ ಈ ಸಮಯದಲ್ಲಿ ಮತ್ತು ಯಾವಾಗಲೂ ನಾವು ಪ್ರಸ್ತುತವಾಗಿರಲು ನಮ್ಮಲ್ಲಿರುವ ಕೌಶಲ್ಯಗಳನ್ನು ಹರಿತಗೊಳಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ವಿಶ್ವ ಯುವಕರ ಕೌಶಲ್ಯ ದಿನದ ಅಂಗವಾಗಿ ದೆಹಲಿಯಲ್ಲಿ ಡಿಜಿಟಲ್ ಶೃಂಗವನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ನಮ್ಮ ಕೆಲಸ, ಕಾರ್ಯಗಳು, ಉದ್ಯೋಗದ ಲಕ್ಷಣಗಳ ಜೊತೆಗೆ ಸಂಸ್ಕೃತಿಯನ್ನು ಕೂಡ ಬದಲಾಯಿಸಿದೆ. ವೇಗವಾಗಿ ತಂತ್ರಜ್ಞಾನ ಬದಲಾಗುತ್ತಿರುವ ಈ ಸಮಯಗಳಲ್ಲಿ ನಮ್ಮ ಮೇಲೆ ಅಗಾಧ ಪ್ರಭಾವ ಬೀರುತ್ತಿದೆ, ಅದಕ್ಕೆ ತಕ್ಕಂತೆ ನಾವು ಆಧುನೀಕರಣವಾಗುತ್ತಿರಬೇಕು ಎಂದರು.

ನಾವು ಯಾವಾಗಲೂ, ಯಾವ ಪರಿಸ್ಥಿತಿಗೂ ಪ್ರಸ್ತುತವಾಗಿ ಉಳಿಯಲು ಕೌಶಲ್ಯ, ಮರು ಕೌಶಲ್ಯ, ಹೆಚ್ಚು ಕೌಶಲ್ಯ ಹೊಂದಬೇಕಾಗಿರುವುದು ಯಶಸ್ಸಿನ ಮೂಲ ಮಂತ್ರವಾಗಿದೆ. ಹೊಸ ಕೌಶಲ್ಯಗಳನ್ನು ಕಲಿಯುತ್ತಿರಬೇಕು, ಆ ಮೂಲಕ ನಮ್ಮ ಅಗತ್ಯತೆಯ ಮೌಲ್ಯಗಳನ್ನು ಬೆಳೆಸುತ್ತಾ ಹೋಗಬೇಕು. ನಮ್ಮ ದಿನನಿತ್ಯದ ಜೀವನದಲ್ಲಿ ಕೆಲಸ, ಕೌಶಲ್ಯಗಳ ಜೊತೆ ಹೊಸದನ್ನು ಕಲಿಯುತ್ತಾ ಹೋಗಿ, ಕೌಶಲ್ಯದ ಮಟ್ಟವನ್ನು ಬೆಳೆಸಿಕೊಳ್ಳುತ್ತಾ ಹೋದರೆ ಆಗ ನಾವು ಯಾವ ಕಾಲಕ್ಕೂ ಸಲ್ಲುವವರಾಗಿ, ಯಾವತ್ತಿಗೂ ಪ್ರಸ್ತುತವಾಗುಳಿಯುತ್ತೇವೆ ಎಂದು ಯುವಜನತೆಗೆ ಕಿವಿಮಾತು ಹೇಳಿದರು.

ಒಬ್ಬ ವ್ಯಕ್ತಿ ಜೀವನದಲ್ಲಿ ಹೊಸ ವಿಷಯಗಳನ್ನು, ಹೊಸ ಕೌಶಲ್ಯಗಳನ್ನು ಕಲಿಯದೆ ಇದ್ದರೆ ಕೆಲ ಸಮಯಗಳ ಬಳಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಕೌಶಲ್ಯ ಎಂಬುದಕ್ಕೆ ಯಾವುದೇ ಕಾಲಮಿತಿ ಇಲ್ಲ. ಕಾಲಾನುಕ್ರಮದಲ್ಲಿ ನಾವು ಹೇಗೆ ಕೆಲಸ ಮಾಡುತ್ತೇವೆಯೋ ಹಾಗೆ ಆ ಕೌಶಲ್ಯ ವೃದ್ಧಿಯಾಗುತ್ತ ಹೋಗುತ್ತದೆ. ಅದು ನಮಗೆ ನಾವೇ ಕೊಡಬಹುದಾದ ಉಡುಗೊರೆ.ಅದರಿಂದ ಜೀವನದಲ್ಲಿ ಉತ್ಸಾಹ, ಶಕ್ತಿ ಹೆಚ್ಚುತ್ತದೆ ಎಂದರು.

ಕೌಶಲ್ಯ-ತಿಳುವಳಿಕೆ: ಕೆಲವು ಜನರಿಗೆ ತಿಳುವಳಿಕೆ ಮತ್ತು ಕೌಶಲ್ಯದ ನಡುವೆ ಗೊಂದಲವಿದೆ. ಪುಸ್ತಕಗಳನ್ನು ಓದಿ, ಇಂಟರ್​ನೆಟ್​ನಲ್ಲಿ ವಿಡಿಯೋ ನೋಡಿ ಮಾಹಿತಿ ಪಡೆದುಕೊಂಡಿದ್ದರೆ ಅದು ತಿಳುವಳಿಕೆ ಎನಿಸುತ್ತದೆಯೇ ಹೊರತು, ಕೌಶಲ್ಯವೆನಿಸಲಾರದು. ವಿಡಿಯೋ ನೋಡಿ ಸೈಕಲ್​ ತುಳಿಯುವುದನ್ನು ಕಲಿಯಲು ಸಾಧ್ಯವೇ? ಸೈಕಲ್ ತುಳಿಯುವುದು ಒಂದು ಕೌಶಲ್ಯ, ಅದನ್ನು ಸ್ವತಃ ರೂಢಿಸಿಕೊಳ್ಳಬೇಕು ಎಂದು ಪ್ರಧಾನಿ ಕಿವಿ ಮಾತು ಹೇಳಿದರು.

ಈ ಶೃಂಗವನ್ನು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಆಯೋಜಿಸಿದ್ದು ಭಾರತದಲ್ಲಿ ಕೌಶಲ್ಯ ಭಾರತ ಅಭಿಯಾನದ 5ನೇ ವಾರ್ಷಿಕೋತ್ಸವ ಕೂಡ ಇಂದು ಆಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×