ನವದೆಹಲಿ: ಭಾರತದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇದೀಗ ಸೋಂಕಿತರ ಸಂಖ್ಯೆ 20,000 ಗಡಿ ದಾಟಿದೆ. ಅಲ್ಲದೆ, ಕೇವಲ 24 ಗಂಟೆಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 49 ಮಂದಿ ಸಾವನ್ನಪ್ಪಿದ್ದಾರೆ.
ಕೊರೋನಾ ಸೋಂಕಿತರ ಸಂಖ್ಯೆ 20 ಸಾವಿರ ಗಟಿ ದಾಟಿರುವ ಹಿನ್ನೆಲೆಯಲ್ಲಿ ಇದೀಗ ಭಾರತ ಜಾಗತಿಕ ಮಟ್ಟದಲ್ಲಿ ಈ ಸಂಖ್ಯೆ ತಲುಪಿದ 17ನೇ ರಾಷ್ಟ್ರವಾಗಿ ಹೊರಹೊಮ್ಮಿದೆ.
2020ರ ಜ.30ರಂದು ಕೇರಳದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು, ಅದಾದ ಕೇವಲ 83 ದಿನಗಳಲ್ಲಿ ಸೋಂಕಿತರ ಸಂಖ್ಯೆ 20,000 ಗಡಿ ದಾಟಿದೆ. ದೇಶದಲ್ಲಿ ಸಿಕ್ಕಿಂ ಹೊರತುಪಡಿಸಿದರೆ ಉಳಿದೆಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕನಿಷ್ಟ ಒಂದಾದರೂ ಪ್ರಕರಣಗಳು ಈ ವರೆಗೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ರಾಜ್ಯದಲ್ಲಿಯೇ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ವರೆಗೂ ಆ ರಾಜ್ಯದಲ್ಲಿ
5,221 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 251 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಗುಜರಾತ್ ರಾಜ್ಯದಲ್ಲಿ 2,272 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, 95 ಮಂದಿ ಸಾವನ್ನಪ್ಪಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2,156 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 47 ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ತಾನದಲ್ಲಿ 1,801 ಸೋಂಕು ಪತ್ತೆಯಾಗಿದ್ದು, 25 ಮಂದಿ ಬಲಿಯಾಗಿದ್ದಾರೆ.
ತಮಿಳುನಾಡಿನಲ್ಲಿ 1,596 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 18 ಜನರು ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 1,592 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, 80 ಮಂದಿ ಸಾವನ್ನಪ್ಪಿದ್ದಾರೆ.
Follow us on Social media