Breaking News

ಕೋವಿಡ್‌ಗಾಗಿ ಹಗಲಿರುಳು ದುಡಿಯುತ್ತಿರುವ ಗುತ್ತಿಗೆ ವೈದ್ಯರ ಸಂಬಳ ಹೆಚ್ಚಳ: ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನ

ಬೆಂಗಳೂರು : ಕೋವಿಡ್ ಗಾಗಿ ಹಗಲಿರುಳು ದುಡಿಯುತ್ತಿರುವ ಗುತ್ತಿಗೆ ವೈದ್ಯರ ಸಂಬಳವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೆಎಸ್ ಆರ್‌ಟಿಸಿ ನೂರಾರು ಕೋಟಿ ನಷ್ಟದಲ್ಲಿದೆ. ಹೀಗಾಗಿ ಬಸ್ ಗಳನ್ನು ಗೂಡ್ಸ್ ಸಾರಿಗೆಯಾಗಿ ಬಳಸಿಕೊಂಡು ಅದರ ಮೂಲಕ ಆದಾಯ ಗಳಿಸಲು ಖಾಸಗಿ ಕಂಪನಿಗಳಿಗೆ ಬಸ್ ಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ತೀರ್ಮಾನಿಸಲಾಯಿತು.
ಕೋವಿಡ್ 19 ರ ನಂತರ ಅಭಿವೃದ್ಧಿ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಆಡಳಿತ ಯಂತ್ರ ಚುರುಕುಗೊಳಿಸಲು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಯಿತು.
ಸಭೆಯಲ್ಲಿ ರೈತರು ಬೆಳೆದ ತರಕಾರಿಗಳು ಕೋವಿಡ್‌ನಿಂದಾಗಿ ಬೆಲೆ‌ ಕಳೆದುಕೊಂಡಿದ್ದು ಅದನ್ನು ಸರ್ಕಾರವೇ ಕೊಂಡುಕೊಂಡು ಕೋಲ್ಡ್‌ ಸ್ಟೋರೇಜ್ ನಲ್ಲಿ ಇಟ್ಟು ತದ‌ನಂತರ‌ ಮಾರಾಟ ಮಾಡುವಂತೆ ಸೂಚಿಸಲಾಯಿತು.
ಹೆಚ್ಚುದಿನ‌ ಇಡುವುದಕ್ಕೆ‌ ಸಾಧ್ಯವಾಗದ ತರಕಾರಿಗಳು, ಹಣ್ಣುಗಳು ಸೇರಿದಂತೆ ರೈತರು‌ ಬೆಳೆಯುವ ಬೆಳೆಗಳನ್ನು ಇತರೆ ರಾಜ್ಯಗಳಿಗೆ ಮತ್ತು ಹೊರದೇಶಗಳಿಗೆ ಕಳುಹಿಸಿ‌ ಮಾರಾಟ‌‌ ಮಾಡುವಂತೆ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ‌‌ ನೀಡಲಾಯಿತು.
ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎಲ್ಲೆಲ್ಲಿ ನೀರಿನ ಅಭಾವವಿದೆಯೋ ಅಲ್ಲಲ್ಲಿ ತುರ್ತಾಗಿ ನೀರಿನ‌ ಸರಬರಾಜು ಮಾಡುವಂತೆ, ಕೋವಿಡ್ ಭೀತಿ ಇರುವುದರಿಂದ ಗುಣಮಟ್ಟದ ನೀರನ್ನು ಸರಬರಾಜು ಮಾಡಲು ಹಾಗೂ ಕೋವಿಡ್ ಬಗ್ಗೆ ಗ್ರಾಮ ಮಟ್ಟದಲ್ಲಿ ಟಾಸ್ಟ್ ಪೋರ್ಸ್ ರಚನೆ‌ ಮಾಡಲಾಗಿದ್ದು ಅದನ್ನು ಇನ್ನಷ್ಟು ಚುರುಕುಗೊಳಿಸಲು ಸೂಚಿಸಲಾಯಿತು.
ಕೇಂದ್ರ ಸಚಿವ ಸದಾನಂದಗೌಡ ಅವರಿಂದ ಗೊಬ್ಬರಕ್ಕೆ ಸಂಬಂಧಿಸಿದಂತೆ ಮಾಹಿತಿ‌ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ‌‌ ಕಡಿಮೆ‌ ಇರುವುದರಿಂದ ಇರುವ ಬೆಲೆಗಿಂತ ರೈತರಿಗೆ ಕಡಿಮೆ ಬೆಲೆಗೆ ಗೊಬ್ಬರ ಮಾರಾಟ ಮಾಡಲಾಗುವುದು ಎಂಬ ಅಂಶವನ್ನು ಕೇಂದ್ರ ಸಚಿವರಿಂದ ಸ್ಪಷ್ಟಪಡಿಸಿಕೊಂಡರು. ಇದನ್ನು ರೈತರಿಗೆ ಮನವರಿಕೆ ಮಾಡಿಕೊಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಸರ್ಕಾರಿ‌ ಜಾಗವನ್ನು ಲೀಸ್ ಗೆ ಪಡೆದು ಇದುವರೆಗೆ ಕೆಲಸ ಶುರು‌ ಮಾಡದೆ ಲೀಸ್ ಕಂಡಿಷನ್ ಉಲ್ಲಂಘನೆ‌ ಮಾಡಿದ ಜಾಗಗಳನ್ನು ಸರ್ಕಾರ ಹಿಂಪಡೆಯಲು,
ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಡ್ಯಾಮ್ ಗಳಲ್ಲಿ ಹೆಚ್ಚು ನೀರು‌ ಸಂಗ್ರಹವಾಗಿದ್ದರೆ ರೈತರ ಬೆಳೆಗಳಿಗೆ‌‌ ಮತ್ತು‌ ಕುಡಿಯುವ ನೀರಿಗೆ ಹರಿಸಲು ಹಾಗೂ ಕಳೆದ ವರ್ಷ ಆದ ಅನಾಹುತ ಮತ್ತೆ‌‌ ಮರುಕಳಿಸದಂತೆ ಡ್ಯಾಮ್ ಗಳಲ್ಲಿ ಪ್ರತಿನಿತ್ಯ ಲಭ್ಯವಿರುವ ನೀರಿನ‌ ಮಾಹಿತಿಯನ್ನು‌ ಪಡೆಯುವಂತೆ ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚಿಸಿದರು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೋವಿಡ್ ನಿಂದಾಗಿ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವುದರಿಂದ ದೇಶಿಯ ಪ್ರವಾಸಿಗರನ್ನು ಆಕರ್ಷಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಯಿತು. ಇದರ ಜೊತೆಗೆ ಅಲ್ಲಿ ಕೋವಿಡ್ ಇಲ್ಲ ಎನ್ನುವುದನ್ನು ಪ್ರವಾಸಿಗರಿಗೆ‌ ಮನವರಿಕೆ ಮಾಡಿಕೊಡಲು ಈ ಬಗ್ಗೆ ಪ್ರಚಾರ ಮಾಡಬೇಕು ಎಂದು ಸೂಚನೆ‌ ನೀಡಲಾಯಿತು.
ಮಕ್ಕಳಿಗೆ ಆನ್ ಲೈನ್ ತರಬೇತಿ, ದೂರದರ್ಶನದ ಮೂಲಕ ಮಕ್ಕಳಿಗೆ ಪಾಠ ಸೇರಿದಂತೆ ಇತರೆ ಚಟುವಟಿಕೆ ಗಳನ್ನು ಶಾಲೆ ತೆರೆಯುವವರೆಗೂ ಮುಂದುವರಿಸಲು ತೀರ್ಮಾನಿಸಲಾಯಿತು.
ಕಲ್ಯಾಣ ಕರ್ನಾಟಕ ಮತ್ತು ಇತರೆ ಅಭಿವೃದ್ಧಿ ಮಂಡಳಿಗಳ ಭಾಗದಲ್ಲಿ ಭಾಗದಲ್ಲಿ ತುರ್ತಾಗಿ ಆಗಬೇಕಾಗಿರುವ ಕೆಲಸ ಕಾರ್ಯಗಳತ್ತ ಗಮನಹರಿಸಲು ಮಾಡಲು ಸೂಚನೆ ನೀಡಲಾಯಿತು.

Source : UNI

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×