ಕೋಝಿಕೋಡು : ಕೇರಳದ ಕೋಝಿಕೋಡಿನಲ್ಲಿ ಶುಕ್ರವಾರ ನಡೆದ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 20 ಕ್ಕೆ ಏರಿದೆ.
ಶುಕ್ರವಾರ 184 ಮಂದಿ ಪ್ರಯಾಣಿಕರನ್ನು ಹೊತ್ತು ದುಬೈಯಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೋಝಿಕೋಡು ರನ್‌ವೇಯಿಂದ ಜಾರಿ ಪ್ರಪಾತಕ್ಕೆ ಉರುಳಿದ್ದು ದುರಂತದಲ್ಲಿ ಈವರೆಗೆ ಪೈಲಟ್ ಮತ್ತು ಸಹ ಪೈಲಟ್ ಸೇರಿದಂತೆ 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್ ಸಿಂಗ್ ಪುರಿ ಶನಿವಾರ ಭೇಟಿ ನೀಡಿದ್ದು, ಅಪಘಾತಕ್ಕೀಡಾಗಿರುವ ವಿಮಾನದ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ತನಿಖೆ ನಡೆಸುತ್ತಿದೆ. ಈ ದುರಂತದ ಬಗ್ಗೆ ಹಿರಿಯ ನಾಗರಿಕ ವಿಮಾನಯಾನ ಅಧಿಕಾರಿಗಳು ಮತ್ತು ವೃತ್ತಿಪರರೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ.
ಭಾರೀ ಮಳೆಯ ನಡುವೆಯೂ ಉಬ್ಬಿದ ರನ್ ವೇಯಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಪ್ರಯತ್ನವನ್ನು ಪೈಲಟ್ ಎರಡು ಬಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು ವಿಮಾನ ಲ್ಯಾಂಡ್ ಆಗುವುದಕ್ಕೂ ಮುನ್ನ ಹಲವು ಬಾರಿ ಏರ್ಪೋರ್ಟ್ ಅನ್ನು ಸುತ್ತಾಡಿದೆ ಎಂದು ವರದಿಯಾಗಿದೆ.
ಹಾಗೆಯೇ ದುಬೈನಿಂದ ಕೊಯಿಕ್ಕೋಡ್‌ಗೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತಕ್ಕೀಡಾಗುವ ಮೊದಲು ರನ್‌ವೇನಿಂದ ಸಾವಿರ ಮೀಟರ್ ದೂರದಲ್ಲಿರುವ ಟಾಕ್ಸಿ ವೇ ಬಳಿ ಭೂ ಸ್ಪರ್ಶಿಸಿದೆ ಎನ್ನಲಾಗಿದೆ.
ಏತನ್ಮಧ್ಯೆ, ಎನ್‌ಡಿಆರ್‌ಎಫ್ ಶೀಘ್ರವೇ ಸ್ಥಳಕ್ಕೆ ತಲುಪಲು ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಕರಿಸುವಂತೆ ಗೃಹ ಸಚಿವ ಅಮಿತ್ ಶಾ ಅವರು ನಿರ್ದೇಶಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಈ ದುರಂತದ ಬಗ್ಗೆ ಡಿಜಿಸಿಎ ತನಿಖೆಗೆ ಆದೇಶಿಸಲಾಗಿದ್ದು ಈ ಬಗ್ಗೆ ಮಾಹಿತಿ ನೀಡಿರುವ ಡಿಜಿಸಿಎ ನಿರ್ದೇಶಕ ಅರುಣ್ ಕುಮಾರ್ ಅವರು, ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ವಿಮಾನ ಸರಿಯಗಿ ಲ್ಯಾಂಡ್ ಆಗಿಲ್ಲ. ಸುಮಾರು 35 ಅಡಿ ಪ್ರಪಾತಕ್ಕೆ ವಿಮಾನ ಜಾರಿ ಬಿದ್ದಿದೆ. ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದ್ದು ಪರಿಸ್ಥಿತಿ ಅವಲೋಕನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
Follow us on Social media