ನವದೆಹಲಿ: ಇತ್ತೀಚೆಗೆ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಯಾರು ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರಲ್ಲಿ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ನಡುವೆ ಭಾರಿ ಪೈಪೋಟಿ ಇದೆ.
ಆದರೆ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ಸರ್ವಶ್ರೇಷ್ಠ ಎಂದು ಸರ್ಫರಾಜ್ ಆಯ್ಕೆ ಮಾಡಿದ್ದು, ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂದಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ ಅವರ ಟೈಮಿಂಗ್ ಬಗ್ಗೆಯೂ ಗುಣಗಾನ ಮಾಡಿದ್ದು, ಕೊಹ್ಲಿಗೆ ಸಮನಾಗಿ ನಿಲ್ಲಬಲ್ಲ ಆಟಗಾರ ಎಂದಿದ್ದಾರೆ.
ಇತ್ತೀಚೆಗೆ ಈ ಬಗ್ಗೆ ಚರ್ಚಿಸಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್, ಕೆಲ ಅಚ್ಚರಿಯ ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ. ಅಂದಹಾಗೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಮತ್ತು ಕಳೆದ ವರ್ಷ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ರೌಂಡ್ ರಾಬಿನ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕ್ ತಂಡವನ್ನು ಮುನ್ನಡೆಸಿದ್ದು ಇದೇ ಸರ್ಫರಾಜ್ ಅಹ್ಮದ್ ಎಂಬುದು ವಿಶೇಷ.
ಆದರೆ, ಕಳೆದ ವರ್ಷ ಪಾಕಿಸ್ತಾನ ತಂಡ ವಿಶ್ವಕಪ್ ಟೂರ್ನಿಯ ನಾಕ್‌ಔಟ್ ಹಂತಕ್ಕೆ ಕಾಲಿಡುವಲ್ಲಿ ವಿಫಲವಾದ ಕಾರಣಕ್ಕೆ ಮೂರೂ ಮಾದರಿಗಳಲ್ಲಿ ಸರ್ಫರಾಜ್ ನಾಯಕತ್ವ ಕಳೆದುಕೊಂಡರಲ್ಲದೆ ತಂಡದಿಂದಲೂ ಹೊರಬಿದ್ದರು. ಇದೀಗ ಕ್ರಿಕ್‌ಟ್ರ್ಯಾಕರ್ ವೆಬ್‌ಸೈಟ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ನಾಯಕತ್ವದ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ತಾರೆಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಂದು ವಿಶ್ವದ ಬಲಿಷ್ಠ ಬೌಲಿಂಗ್ ವಿಭಾಗಗಳನ್ನೂ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ಅಬ್ಬರಿಸಿದರೂ ಅಂದು ಭಾರತಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ. ಹೀಗಾಗಿ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಟೀಮ್ ಇಂಡಿಯಾ ತಾರೆಗಳ ಸಾಮರ್ಥ್ಯವನ್ನು ಕೊಂಡಾಡುತ್ತಿದ್ದಾರೆ.
Follow us on Social media