ಬೆಂಗಳೂರು: ರಾಜ್ಯದಲ್ಲಿ ಬುಧವಾರ ಮತ್ತೆ 9 ಹೊಸ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 427ಕ್ಕೇರಿಕೆಯಾಗಿದೆ.
ಇಂದು ಬೆಳಗ್ಗೆ ಏಳು ಮಂದಿಗೆ ಹಾಗೂ ಸಂಜೆ ಇಬ್ಬರಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಇಲ್ಲಿಯವರೆಗೆ 17 ಜನರು ಮೃತಪಟ್ಟಿದ್ದು, 131 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಸಂಜೆ ಮೈಸೂರಿನ ನಂಜನಗೂಡಿನಲ್ಲಿ ಮತ್ತೆ ಇಬ್ಬರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇಂದು ಒಟ್ಟು 9 ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಎರಡು ಪ್ರಕರಣಗಳು ಹಾಗೂ ಸೂರ್ಯ ನಗರಿ ಕಲಬುರಗಿ ಜಿಲ್ಲೆಯಲ್ಲಿ ಐದು ಹೊಸ ಕೊವಿಡ್-19 ಪ್ರಕರಣಗಳು ದೃಢಪಟ್ಟಿವೆ.
ಬೆಂಗಳೂರು ನಗರದ 54 ವರ್ಷ ಮತ್ತು 28 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ನಾಲ್ಕು ತಿಂಗಳ ಮಗು ಸೇರಿದಂತೆ ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೆ ಐವರಿಗೆ ಕೊವಿಡ್ 19 ದೃಢಪಟ್ಟಿದೆ. 46 ವರ್ಷದ ಮಹಿಳೆ, 57 ವರ್ಷದ ಪುರುಷ, 36 ವರ್ಷದ ಮಹಿಳೆ ಹಾಗೂ 25 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
25 ವರ್ಷದ ಮಹಿಳೆ ನಾಲ್ಕು ತಿಂಗಳ ಮಗುವಿನ ತಾಯಿಯಾಗಿದ್ದು, ಅವರನ್ನು ಕಲಬುರ್ಗಿಯ ಇಎಸ್ಐಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೊಂದಿಗೆ ಕಲಬುರಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 35ಕ್ಕೇರಿದೆ.
Follow us on Social media