ಜಿನೀವಾ: ಕೊರೋನಾ ವೈರಸ್ ಪ್ರಕರಣದಲ್ಲಿ ಡಬ್ಲ್ಯೂ ಹೆಚ್ ಒ ವಿಶ್ವಸಮುದಾಯಕ್ಕೆ ಪ್ರಾರಂಭದಲ್ಲೇ ಮಾಹಿತಿ ನೀಡದೇ ಚೀನಾ ಪರ ಕೆಲಸ ಮಾಡಿದೆ ಎಂಬ ಆರೋಪ ಹಲವು ದಿನಗಳಿಂದ ಕೇಳಿಬರುತ್ತಿದೆ. ಈ ಆರೋಪವನ್ನು ಅಲ್ಲಗಳೆಯುವ ನಿಟ್ಟಿನಲ್ಲಿ ಈಗ ಡಬ್ಲ್ಯೂ ಹೆಚ್ ಒ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.
ವುಹಾನ್ ನಲ್ಲಿ ಕೊರೋನಾ ವೈರಸ್ ನ ಮೊದಲ ಪ್ರಕರಣದ ಬಗ್ಗೆ ಅಲರ್ಟ್ ನೀಡಿದ್ದು ಚೀನಾದಲ್ಲಿರುವ ತನ್ನ ಕಚೇರಿಯೇ ಹೊರತು ಸ್ವತಃ ಚೀನಾವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೊರೋನಾಗೆ ನಿರ್ವಹಣೆಯ ವಿಚಾರವಾಗಿ ತನ್ನ ವಿರುದ್ಧ ಕೇಳಿಬರುತ್ತಿದ್ದ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಏ.29 ರಂದು ತಾನು ನಡೆಸಿದ್ದ ಪ್ರಾರಂಭಿಕ ಸಂವಹನಗಳ ಕುರಿತು ಮಾಹಿತಿ ಬಹಿರಂಗಪಡಿಸಿತ್ತು. ಆ ಮಾಹಿತಿಯ ಪ್ರಕಾರ ವುಹಾನ್ ಮುನ್ಸಿಪಾಲ್ ಹೆಲ್ತ್ ಕಮಿಷನ್ ಡಿ.31 ರಂದು ನ್ಯುಮೋನಿಯಾ ಪ್ರಕರಣಗಳನ್ನು ವರದಿ ಮಾಡಿತ್ತು. ಆದರೆ ಅದನ್ನು ಯಾರು ಬಹಿರಂಗಪಡಿಸಿದ್ದು ಎಂಬುದರ ಬಗ್ಗೆ ವಿಶ್ವಸಸ್ಥೆ ಸಷ್ಟಪಡಿಸಿರಲಿಲ್ಲ.
ಆದರೆ ವಿಶ್ವಸಂಸ್ಥೆ ಈ ವಾರ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಡಿ.31 ರಂದು ವುಹಾನ್ ನಲ್ಲಿ ಕೊರೋನಾ ಪ್ರಕರಣ ವರದಿಯಾಗಿರುವುದರ ಬಗ್ಗೆ ಮೊದಲು ಎಚ್ಚರಿಸಿದ್ದೇ ಡಬ್ಲ್ಯೂ ಹೆಚ್ ಒ ಎಂದು ಹೇಳಿದೆ. ಅದೇ ದಿನ ಡಬ್ಲ್ಯೂ ಹೆಚ್ ಒ ಸಾಂಕ್ರಾಮಿಕ ಮಾಹಿತಿ ಸೇವೆಗೆ ಅಮೆರಿಕಾದಲ್ಲಿರುವ ಇಂಟರ್ನ್ಯಾಷನಲ್ ಎಪಿಡೊಮಿಯೋಲಾಜಿಕಲ್ ಸರ್ವಿಜಲೆನ್ಸ್ ನೆಟ್ವರ್ಕ್ ಪ್ರೋಮೆಡ್ ನಿಂದ ಕೊರೋನಾ ಹರಡಿರುವ ಸುದ್ದಿ ಬರುತ್ತದೆ. ಇದು ವುಹಾನ್ ನಲ್ಲಿ ವರದಿಯಾಗಿದ್ದ ನ್ಯುಮೋನಿಯಾಗೆ ಹೋಲಿಕೆಯಾಗುತ್ತಿರುತ್ತದೆ. ಈ ಘಟನೆಯಾದ ಬೆನ್ನಲ್ಲೇ ಜ.1 ಹಾಗೂ ಜ.2 ರಂದು ಎರಡು ಬಾರಿ ಚೀನಾದ ಅಧಿಕಾರಿಗಳಿಗೆ ಹೊಸ ರೋಗದ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದ ವಿಶ್ವ ಆರೋಗ್ಯ ಸಂಸ್ಥೆಗೆ ಜ.03 ರಂದು ಮಾಹಿತಿ ಲಭ್ಯವಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಪ್ತಿಗೆ ಬರುವ ಯಾವುದೇ ಘಟನೆಗಳಿದ್ದರೂ ಅದರ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಕ್ಕೆ ಯಾವುದೇ ದೇಶಗಳಿಗೆ 24-48 ಗಂಟೆಗಳ ಕಾಲಾವಕಾಶ ಇರಲಿದೆ. ವಿಶ್ವಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಡಬ್ಲ್ಯೂ ಹೆಚ್ ಒ ಮಾಹಿತಿ ಕೇಳಿದ ಬೆನ್ನಲ್ಲೆ ಚೀನಾ ಅಧಿಕಾರಿಗಳು ಅದನ್ನು ದೃಢೀಕರಿಸಿದ್ದಾರೆ.
Follow us on Social media