ಬೆಂಗಳೂರು: ಕೊರೋನಾ ಸೋಂಕಿನ ಲಕ್ಷಣ ಕಂಡುಬಂದು ನಂತರ ಪರೀಕ್ಷೆ ಮಾಡಿಸಿಕೊಂಡು ಅದರಲ್ಲಿ ಪಾಸಿಟಿವ್ ಬಂದ ಮೇಲೆ ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.
ಸುಮಲತಾ ಅಂಬರೀಷ್ ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಕೇಳಿಬರುತ್ತಿರುವ ಸುದ್ದಿಗಳಿಗೆ ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿರುವ ಅವರು, ಕೊರೋನಾದಿಂದ ಇನ್ನು ಕೆಲವೇ ದಿನಗಳಲ್ಲಿ ಗುಣಮುಖ ಹೊಂದಿ ಮತ್ತೆ ಸಾರ್ವಜನಿಕ ಜೀವನಕ್ಕೆ ಮರಳುತ್ತೇನೆ ಎನ್ನುವ ಭರವಸೆಯಿದೆ. ನಾನು ಸಂಪೂರ್ಣವಾಗಿ ಗುಣಮುಖವಾಗಿರುವುದು, ಕ್ವಾರಂಟೈನ್ ಅವಧಿ ಮುಗಿದು, ಪರೀಕ್ಷೆಯ ವರದಿ ತಿಳಿದ ಬಳಿಕವಷ್ಟೆ. ಸದ್ಯಕ್ಕೆ ಔಷಧಿ ಹಾಗೂ ಸುಶ್ರೂಷೆ ಮುಂದುವರೆದಿದೆ. ನಾನು ಗುಣಮುಖ ಆಗಲೆಂದು ನೀವೆಲ್ಲರೂ ಮಾಡಿದ ಆಶೀರ್ವಾದ, ಹಾರೈಕೆಗಳಿಗೆ ಋಣಿ ಎಂದಿದ್ದಾರೆ.
ಆದರೆ ಕೊರೋನಾ ಸೋಂಕಿತರನ್ನು ಅವಮಾನದಿಂದ ಕಾಣುವ, ನಿಂದಿಸುವ ವರ್ತನೆ ಕಾಣುತ್ತಿದ್ದು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಸೇರಿ ಕೊರೋನಾ ವಿರುದ್ಧ ಹೋರಾಡೋಣ, ಸೋಂಕಿತರನ್ನು ಅಪರಾಧಿಗಳಂತೆ ಕಾಣಬೇಡಿ ಎಂದು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
