ಮುಂಬೈ: ಕಳೆದ ತಿಂಗಳು ಸಿಲ್ವರ್ ಲೇಕ್ ಘೋಷಿಸಿದ್ದ 5,655.75 ಕೋಟಿ ರೂ.ಗಳ ಹೂಡಿಕೆಗೆ ಹೆಚ್ಚುವರಿಯಾಗಿ, ಸಿಲ್ವರ್ ಲೇಕ್ ಹಾಗೂ ಸಹ-ಹೂಡಿಕೆದಾರರು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 4,546.80 ಕೋಟಿ ರೂ.ಗಳ ಹೆಚ್ಚುವರಿ ಹೂಡಿಕೆ ಮಾಡಲಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (“ರಿಲಯನ್ಸ್ ಇಂಡಸ್ಟ್ರೀಸ್”) ಹಾಗೂ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (“ಜಿಯೋ ಪ್ಲಾಟ್‌ಫಾರ್ಮ್ಸ್”) ಘೋಷಿಸಿವೆ.
ಈ ಮೂಲಕ ಸಿಲ್ವರ್ ಲೇಕ್ ಹಾಗೂ ಅದರ ಸಹ-ಹೂಡಿಕೆದಾರರು ಒಟ್ಟು 10,202.55 ಕೋಟಿ ರೂ.ಗಳ ಹೂಡಿಕೆ ಮಾಡಿದಂತಾಗಿದೆ. ಸಿಲ್ವರ್ ಲೇಕ್ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದ್ದು, ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಶೇ.2.08ರಷ್ಟು ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ.
ಈ ಹೂಡಿಕೆಯೊಂದಿಗೆ, ಕೊರೋನಾ ಸಂಕಷ್ಟದ ನಡುವೆಯೇ ಆರು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಮುಂಚೂಣಿ ತಂತ್ರಜ್ಞಾನ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 92,202.15 ಕೋಟಿ ರೂ. ಹೂಡಿಕೆ ಪಡೆದುಕೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಭಾರತದಾದ್ಯಂತ ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಮುಂದಿನ ತಲೆಮಾರಿನ ತಂತ್ರಜ್ಞಾನ ವೇದಿಕೆಯಾಗಿದ್ದು, ಅದಕ್ಕೆ 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ.
ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.
Follow us on Social media