ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ವೈರಸ್ ದಿನಕಳೆದಂತೆ ತನ್ನ ಅಟ್ಟಹಾಸವನ್ನು ಜೊರು ಮಾಡುತ್ತಿದ್ದು, ಇದೀಗ ಜಗತ್ತಿನಲ್ಲಿ ಕೊರೋನಾ ವೈರಸ್ ದಾಳಿಗೆ ಅತ್ಯಂತ ಹೆಚ್ಚಾಗಿ ತುತ್ತಾದ ಟಾಪ್ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಬ್ರಿಟನ್ ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ.
ಹೌದು.. ಭಾರತದಲ್ಲಿ ಈ ವರೆಗೂ ಒಟ್ಟಾರೆ ಸೋಂಕಿತರ ಸಂಖ್ಯೆ 2,93,754ಕ್ಕೆ ಏರಿಕೆಯಾಗಿದ್ದು, ಆ ಮೂಲಕ ಭಾರತ 2,91,588 ಸೋಂಕಿತರನ್ನು ಹೊಂದಿರುವ ಬ್ರಿಟನ್ ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದೆ.
ಪಟ್ಟಿಯಲ್ಲಿ 20 ಲಕ್ಷ ಸೋಂಕಿತರನ್ನು ಹೊಂದಿರುವ ಅಮೆರಿಕ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, 7.72 ಲಕ್ಷ ಸೋಂಕಿತರನ್ನು ಹೊಂದಿರುವ ಬ್ರೆಜಿಲ್ 2ನೇ ಸ್ಥಾನದಲ್ಲಿದೆ. 4.93 ಲಕ್ಷ ಸೋಂಕಿತರನ್ನು ಹೊಂದಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ. ಭಾರತದ ಬಳಿಕ ಸ್ಪೇನ್ ಮತ್ತು ಇಟಲಿ ದೇಶಗಳಿವೆ.
ಕೇವಲ 18 ದಿನಗಳಲ್ಲಿ 10 ರಿಂದ 4ನೇ ಸ್ಥಾನಕ್ಕೆ ಜಿಗಿದ ಭಾರತ
ಭಾರತದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಮೇ 24ರ ಬಳಿಕ ಗಣನೀಯವಾಗಿ ಹೆಚ್ಚಳವಾಗಿದ್ದು, ಟಾಪ್ 10 ಪಟ್ಟಿಯಲ್ಲೇ ಇರದ ಭಾರತ ಕೇವಲ 1 ದಿನಗಳಲ್ಲಿ 10 ರಿಂದ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ವಲಸೆ ಕಾರ್ಮಿಕರಿಗೆ ರೈಲು ವ್ಯವಸ್ಥೆ ಮಾಡಿದ ಬಳಿಕ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.