ಮುಂಬೈ: ಬಾಲಿವುಡ್ ನ ಹೆಸರಾಂತ ಸಂಗೀತ ನಿರ್ದೇಶಕ ಮತ್ತು ಗಾಯಕ ಸಾಜಿದ್-ವಾಜಿದ್ ಖ್ಯಾತಿಯ ವಾಜಿದ್ ಖಾನ್ ನಿಧನರಾಗಿದ್ದಾರೆ. ಅವರಿಗೆ 42 ವರ್ಷ ವಯಸ್ಸಾಗಿತ್ತು.
ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ವಾಜಿದ್ ಖಾನ್ ರನ್ನು ಕೋಕಿಲಾಬೆನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಭಾನುವಾರ ರಾತ್ರಿ ಆರೋಗ್ಯದಲ್ಲಿ ತೀವ್ರ ವೆಂಟಿಲೇಟರ್ ನಲ್ಲಿಡಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಾಜಿದ್ ಖಾನ್ ನಿಧನರಾಗಿದ್ದಾರೆ. ಕಿಡ್ನಿ ಸಂಬಂಧಿ ಖಾಯಿಲೆಯಿಂದಲೂ ಬಳಲುತ್ತಿದ್ದ ವಾಜಿದ್ ಖಾನ್, ಕೆಲವೇ ತಿಂಗಳುಗಳ ಹಿಂದೆಯಷ್ಟೇ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗೆ ಒಳಗಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇನ್ನು ಬಾಲಿವುಡ್ ನಲ್ಲಿ ಸಾಜಿದ್-ವಾಜಿದ್ ಜೋಡಿ ಎಂದೇ ಖ್ಯಾತಿಗಳಿಸಿದ್ದ ವಾಜಿದ್ ಖಾನ್, 1998 ರಲ್ಲಿ ಬಿಡುಗಡೆಗೊಂಡ ಸಲ್ಮಾನ್ ಖಾನ್ ಅಭಿನಯದ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ‘ಚೋರಿ ಚೋರಿ’, ‘ಹಲೋ ಬ್ರದರ್’, ‘ಮುಜ್ಸೆ ಶಾದಿ ಕರೋಗಿ’, ‘ಪಾರ್ಟ್ನರ್’, ‘ವಾಂಟೆಡ್’, ‘ದಬಾಂಗ್’ ಮುಂತಾದ ಚಲನಚಿತ್ರಗಳಿಗೆ ಸಹೋದರ ಸಾಜಿದ್ ಖಾನ್ ಜೊತೆಗೆ ಸೇರಿ ವಾಜಿದ್ ಖಾನ್ ಸಂಗೀತ ಸಂಯೋಜಿಸಿದ್ದರು.
ಸಾಜಿದ್-ವಾಜಿದ್ ಬ್ರದರ್ಸ್ ಕಾಂಬಿನೇಷನ್ ನಿಂದ ಬಾಲಿವುಡ್ ಗೆ ಹಲವು ಸೂಪರ್ ಹಿಟ್ ಹಾಡುಗಳು ಲಭಿಸಿವೆ. 2008 ರಲ್ಲಿ ಬಿಡುಗಡೆಯಾದ ‘ಪಾರ್ಟ್ನರ್’ ಚಿತ್ರದ ಮೂಲಕ ವಾಜಿದ್ ಖಾನ್ ಗಾಯಕರಾಗಿ ಗುರುತಿಸಿಕೊಂಡರು. ‘ಹುಡ್ ಹುಡ್ ದಬಾಂಗ್’, ‘ಜಲ್ವಾ’, ‘ಚಿಂತಾ ತ..’ ಮುಂತಾದ ಹಿಟ್ ಸಾಂಗ್ಸ್ ಗೆ ವಾಜಿದ್ ಖಾನ್ ದನಿಯಾಗಿದ್ದರು. ವಾಜಿದ್ ಖಾನ್ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ. ವಾಜಿದ್ ಖಾನ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಿಯಾಂಕಾ ಛೋಪ್ರಾ, ಖ್ಯಾತ ಪತ್ರಕರ್ತ ರಜತ್ ಶರ್ಮಾ, ಖ್ಯಾತ ಗಾಯಕ ಅದ್ನಾನ್ ಸಮಿ ಟ್ವೀಟ್ ಮಾಡಿದ್ದಾರೆ.
Follow us on Social media