ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಉದ್ಯೋಗಿಗಳಿಗೆ 2021ರ ಜುಲೈವರೆಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಅಲ್ಲದೆ ಕಚೇರಿ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಹೆಚ್ಚುವರಿ 1 ಸಾವಿರ ಡಾಲರ್ ನೆರವು ಕೂಡ ಘೋಷಣೆ ಮಾಡಿದೆ.
ಹೌದು.. ಅಮೆರಿಕ ಮೂಲದ ಬೃಹತ್ ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್‌ಬುಕ್ ತನ್ನ ಉದ್ಯೋಗಿಗಳಿಗೆ ಮುಂದಿನ ವರ್ಷ 2021ರ ಜುಲೈವರೆಗೂ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸೂಚಿಸಿದೆ. ಈ ಬಗ್ಗೆ ಫೇಸ್‌ಬುಕ್ ಕಂಪನಿಯ ವಕ್ತಾರರು ಇ–ಮೇಲ್ ಮೂಲಕ ಖಚಿತಪಡಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ 2021ರ ಜುಲೈ 31ರವರೆಗೂ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲಿದ್ದಾರೆ. ಉದ್ಯೋಗಿಗಳು ಮನೆಯಲ್ಲಿ ಕೆಲಸ ಮಾಡುವುದರಿಂದ ಕಚೇರಿ ಸೌಕರ್ಯದ ಅಗತ್ಯತೆಗಳಿಗಾಗಿ ಹೆಚ್ಚುವರಿಯಾಗಿ ಒಂದು ಸಾವಿರ ಡಾಲರ್ (74 ಸಾವಿರ) ನೀಡಲಾಗುವುದು ಎಂದು ವಕ್ತಾರರು ಇ-ಮೇಲ್ ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದ ಮಾರ್ಗದರ್ಶನ ನಿಯಮಗಳು ಹಾಗೂ ವೈದ್ಯರ ಸಲಹೆಗಳನ್ನು ಪರಿಗಣಿಸಿ ಕಂಪನಿಯ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ಚರ್ಚೆ ಮಾಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಾಗತಿಕವಾಗಿ ಕಚೇರಿಗಳನ್ನು ತೆರೆಯಲಾಗುತ್ತಿದ್ದು ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ಫೇಸ್‌ಬುಕ್ ಸ್ಪಷ್ಟ ಪಡಿಸಿದೆ.
ಕಳೆದ ವಾರ ಗೂಗಲ್ ಕಂಪೆನಿಯು ಕೂಡ ಮನೆಯಿಂದಲೇ ಕೆಲಸ ಮಾಡುವ ಅವಧಿಯನ್ನು 2021ರ ಜೂನ್ ವರೆಗೂ ವಿಸ್ತರಣೆ ಮಾಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಸಾಮಾಜಿಕ ಮಾಧ್ಯಮ ಟ್ವೀಟರ್ ಕೆಲವು ಉದ್ಯೋಗಿಗಳಿಗೆ ಮಾತ್ರ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
Follow us on Social media